ಕರ್ನಾಟಕ ವಿಧಾನಸಭೆ ಫಲಿತಾಂಶ ಪ್ರಕಟ: ಅತಂತ್ರ ಸ್ಥಿತಿ ನಿರ್ಮಾಣ

ಬೆಂಗಳೂರು, ಮೇ 15-ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಫಲಿತಾಂಶ ಪ್ರಕಟಗೊಂಡಿದ್ದು, ಯಾವ
ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮೈತ್ರಿ
ಸರ್ಕಾರ ರಚನೆಗಾಗಿ ಮೂರು ಪಕ್ಷಗಳ ನಡುವೆ ಜಂಘೀ ಕುಸ್ತಿ ಆರಂಭಗೊಂಡಿದ್ದು, ಮೊದಲ
ಪ್ರಯತ್ನದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರಸರ್ಕಾರ ರಚಿಸುವ ದಿಕ್ಕಿನತ್ತ
ದಾಪುಗಾಲಿಟ್ಟಿವೆ.

ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕಾಂಗ್ರೆಸ್‍ನ ನಾಯಕರಾದ ಗುಲಾಮ್ ನಬಿ ಆಜಾದ್, ಅಶೋಕ್
ಗೆಹ್ಲೋಟ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್
ಸಭೆ ನಡೆಸಿ ಜೆಡಿಎಸ್‍ಗೆ ಬೆಂಬಲ ನೀಡುವುದಾಗಿ ಘೋಷಿಸಿದರು.
ಅದರ ಬೆನ್ನಲ್ಲೇ ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಪಾಲರಿಗೆ ಪತ್ರ ಬರೆದು
ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ನಂತರ ಮೈತ್ರಿ ಸರ್ಕಾರ ರಚನೆಯ ಸಲುವಾಗಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ
ಎಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇದು ಮಹತ್ವದ
ಬೆಳವಣಿಗೆಯಾಗಿದ್ದು, ಬಹಳ ವರ್ಷಗಳ ನಂತರ ಸಿದ್ದರಾಮಯ್ಯ ದೇವೇಗೌಡರ ಮನೆಗೆ ಭೇಟಿ
ನೀಡುತ್ತಿದ್ದಾರೆ.

ಅದರ ಜೊತೆಯಲ್ಲೇ ಸಂಜೆ ವೇಳೆಗೆ ಕಾಂಗ್ರೆಸ್ ನಾಯಕರು ಮತ್ತು ಜೆಡಿಎಸ್ ನಾಯಕರು ಖಾಸಗಿ
ಹೊಟೇಲ್‍ನಲ್ಲಿ ಸಭೆ ನಡೆಸಿ ಮೈತ್ರಿ ಸರ್ಕಾರದ ಬಗ್ಗೆ ಸಮಾಲೋಚನೆ ನಡೆಸಿದರು. ನಂತರ ಉಭಯ
ಪಕ್ಷಗಳ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಿದರು.
ಬಿಜೆಪಿ ಆಕ್ರೋಶ:
ಈ ನಡುವೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ
ವ್ಯಕ್ತಪಡಿಸಿದರು.

ಜನತೆ ಕಾಂಗ್ರೆಸ್‍ನ್ನು ತಿರಸ್ಕರಿಸಿದ್ದಾರೆ. ಆದರೆ ಹಿಂಬಾಗಿಲ ಮೂಲಕ ಕಾಂಗ್ರೆಸ್ ಅಧಿಕಾರ
ಹಿಡಿಯುವ ಹುನ್ನಾರ ನಡೆಸಿದೆ. ಇದು ಜನಾದೇಶಕ್ಕೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
ಮರುಕಳಿಸಿದ 14 ವರ್ಷದ ಹಿಂದಿನ ಇತಿಹಾಸ:
2004ರ ವಿಧಾನಸಭೆ ಚುನಾವಣೆಯಲ್ಲಿ ಇದೇ ರೀತಿಯ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ
ಮೊದಲ ಹಂತದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು.

ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು. ಎರಡು ವರ್ಷದಲ್ಲೇ ಜೆಡಿಎಸ್, ಕಾಂಗ್ರೆಸ್‍ಗೆ
ಕೈಕೊಟ್ಟು ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿತ್ತು. ಕುಮಾರಸ್ವಾಮಿ
ಮುಖ್ಯಮಂತ್ರಿಯಾಗಿದ್ದರು, ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಈಗ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಇರುವುದರಿಂದ ಮತ್ತೆ ಅತಂತ್ರ ಸ್ಥಿತಿ
ನಿರ್ಮಾಣವಾಗಿದೆ. 104 ಸ್ಥಾನಗಳನ್ನು ಪಡೆದಿರುವ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ,
78 ಸ್ಥಾನ ಗಳಿಸಿರುವ ಕಾಂಗ್ರೆಸ್ ಎರಡನೇ ದೊಡ್ಡ ಪಕ್ಷವಾಗಿದೆ. ಜೆಡಿಎಸ್ 38 ಸ್ಥಾನ ಗಳಿಸಿ
ಕಿಂಗ್ ಮೇಕರ್ ಸ್ಥಾನದಲ್ಲಿದೆ. ರಾಜ್ಯದಲ್ಲಿ ಎರಡನೇ ಬಾರಿಗೆ ಬಿಎಸ್‍ಪಿ ಖಾತೆ ತೆರೆದಿದೆ.
ಕೊಳ್ಳೆಗಾಲದಲ್ಲಿ ಮಹೇಶ್ ಅವರು ಬಿಎಸ್‍ಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ರಾಣೆಬೆನ್ನೂರಿನಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಸೋಲಿಸಿ ಪಕ್ಷೇತರ
ಅಭ್ಯರ್ಥಿ ಶಂಕರ್ ಅವರು ಜಯಗಳಿಸಿದ್ದಾರೆ.
ಇನ್ನು ಮುಳಬಾಗಿಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇರಲಿಲ್ಲ. ಕಾಂಗ್ರೆಸ್ ಬೆಂಬಲಿತ
ಎಚ್.ನಾಗೇಶ್ ಜಯಗಳಿಸಿದ್ದಾರೆ.
ಸರ್ಕಾರ ರಚನೆ ಕಸರತ್ತು:
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಎರಡನೇ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಜೆಡಿಎಸ್ ಜೊತೆ
ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದು
ಅನಿವಾರ್ಯವಾಗಿದೆ.
ಜೆಡಿಎಸ್‍ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್‍ನಿಂದ
ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ