ಬೆಂಗಳೂರು: ಮೇ-೧೫: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಸ್ಟ್ರಾಂಗ್ ರೂಂ ತೆರೆದು, ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಆರಂಭದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 38 ಮತ ಎಣಿಕೆ ಕೇಂದ್ರಗಳಲ್ಲಿ ಅಂಚೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಇನ್ನು ಮತ ಎಣಿಕೆ ಕಾರ್ಯ ಆರಂಭದಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಈಗಾಗಲೇ ಅಂಚೆ ಮತಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾಗೋಡು ತಿಮ್ಮಪ್ಪ ಮತ್ತು ಸೊರಬದಲ್ಲಿ ಜೆಡಿಎಸ್ನ ಮಧು ಬಂಗಾರಪ್ಪ ಮುನ್ನಡೆಸಾಧಿಸಿದ್ದಾರೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಮಾನಾಥ ರೈ ಮುನ್ನಡೆ ಸಾಧಿಸಿದ್ದು, ಹಾವೇರಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಮುನ್ನಡೆ ಸಾಧಿಸಿದ್ದಾರೆ.
ಉಳಿದಂತೆ ಬಬಲೇಶ್ವರದಲ್ಲಿ ಕಾಂಗ್ರೆಸ್ನ ಎಂ.ಬಿ. ಪಾಟೀಲ, ಇಂಡಿಯಲ್ಲಿ ಕಾಂಗ್ರೆಸ್ನ ಯಶವಂತರಾಯಗೌಡ ಪಾಟೀಲ, ವಿಜಯಪುರ ನಗರದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಮುನ್ನಡೆ ಸಾಧಿಸಿದ್ದಾರೆ.
ಇತ್ತ ತೀವ್ರ ಕುತೂಹಲ ಕೆರಳಿಸಿರುವ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಅವರು ಬರೊಬ್ಬರಿ 6904 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ನ ರವೀಂದ್ರ, ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಸಿ.ಟಿ. ರವಿ, ಬೆಳ್ತಂಗಡಿಯಲ್ಲಿ ಬಿಜೆಪಿಯ ಹರೀಶ್ ಪೂಂಜಾ ಮುನ್ನಡೆ ಸಾಧಿಸಿದ್ದಾರೆ.
ಇತ್ತ ಶಿಕಾರಿ ಪುರದಲ್ಲಿ ಬಿಎಸ್ ಯಡಿಯೂರಪ್ಪ, ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಮುನ್ನಡೆ ಸಾಧಿಸಿದ್ದಾರೆ.