ಸಿಎಂ ಸಿದ್ದರಾಮಯ್ಯ ಅವರಿಗೆ ತವರು ಚಾಮುಂಡೇಶ್ವರಿಯಲ್ಲಿ ಆರಂಭಿಕ ಹಿನ್ನಡೆ; ಬಾದಾಮಿಯಲ್ಲಿ ಮುನ್ನಡೆ

ಮೈಸೂರು:ಮೇ-15 ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ತವರು ಚಾಮುಂಡೇಶ್ವರಿಯಲ್ಲಿ ಆರಂಭಿಕ ಹಿನ್ನಡೆಯಾಗಿದೆ.

ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಅವರು ಆರಂಭಿಕ ಮುನ್ನಡೆ ಸಾಧಿಸಿದ್ದು, ಆರಂಭದಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಬರೊಬ್ಬರಿ 6904 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ 3425 ಮತ ಪಡೆದಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೋಲುವ ಭೀತಿಯಿಂದಾಗಿಯೇ ಅವರು ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಇತ್ತೀಚಿನ ಟ್ರೆಂಡ್ ಗಳು ಅದನ್ನು ಪುಷ್ಟೀಕರಿಸುತ್ತಿವೆ.

ಚಾಮುಂಡೇಶ್ವರಿಯಲ್ಲಿ ಹಿನ್ನಡೆಯಾದರೂ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಇಲ್ಲಿ ಹಿನ್ನಡೆಯಾಗಿದೆ. ಇತ್ತ ವರುಣಾದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಮುನ್ನಡೆ ಸಾಧಿಸಿದ್ದು, ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮುನ್ನಡೆ ಸಾಧಿಸಿದ್ದಾರೆ. ಅದೇ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ತಿಪ್ಪೇಸ್ವಾಮಿ ಅವರು ಹಿನ್ನಡೆ ಅನುಭವಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ