ಮತ ಎಣಿಕೆ – ಅಭ್ಯರ್ಥಿಗಳ ಎದೆಯಲ್ಲಿ ಢವ ಢವ…

ಬೆಂಗಳೂರು, ಮೇ 14- ನಾಳೆ ಮತ ಎಣಿಕೆ. ಅಭ್ಯರ್ಥಿಗಳ ಎದೆಯಲ್ಲಿ ಢವ ಢವ… ಬೆಂಬಲಿಗರಲ್ಲಿ ಆತಂಕ… ಒಂದೆಡೆ ಫಲಿತಾಂಶ ಏನಾಗುತ್ತದೆಯೋ ಏನೋ ಎಂಬ ತವಕ. ಮತ್ತೊಂದೆಡೆ ಅಭ್ಯರ್ಥಿಗಳು ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಪ್ರತಿ ಬೂತ್‍ನಿಂದ ಮತದಾನವಾಗಿರುವ ಪಟ್ಟಿಯನ್ನು ಹಿಡಿದುಕೊಂಡು ತಮಗೆ ಎಷ್ಟು ಮತದಾನವಾಗಿರಬಹುದು, ಫಲಿತಾಂಶ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ.

ಮೇ 12ರಂದು ನಡೆದಿರುವ ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಾಳೆ ಬೆಳಗ್ಗೆ 8ರಿಂದ ಪ್ರಾರಂಭವಾಗಲಿದೆ. 222 ಕ್ಷೇತ್ರಗಳ ಮತ ಎಣಿಕೆಗೆ ಆಯೋಗ ಎಲ್ಲಾ ರೀತಿಯ ಸಜ್ಜು ಮಾಡಿಕೊಂಡಿದೆ. ಮತ ಎಣಿಕೆ ಕೇಂದ್ರಗಳಿಗೆ ಹೋಗಲು ರಾಜಕೀಯ ಪಕ್ಷಗಳ ಏಜೆಂಟರು, ಬೆಂಬಲಿಗರು ಪಾಸ್ ಹಿಡಿದುಕೊಂಡು ಸಿದ್ಧರಾಗಿದ್ದಾರೆ.

ನಿನ್ನೆಯಿಂದ ಪ್ರತಿ ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿಗಳಲ್ಲಿ ಎಷ್ಟು ಮತಗಳು ತಮಗೆ ಬಂದಿರಬಹುದು. ಯಾವ ವಲಯದಲ್ಲಿ ನಮಗೆ ಮತದಾನವಾಗಿಲ್ಲ ಎಂಬ ಇತ್ಯಾದಿ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ. ಗೆಲ್ಲುವ ವಿಶ್ವಾಸದಲ್ಲಿರುವವರು ಈಗಾಗಲೇ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಭ್ಯರ್ಥಿಗಳನ್ನು ಮಾತನಾಡಿಸಲು ಬರುತ್ತಿರುವವರನ್ನೆಲ್ಲಾ ಆ ಏರಿಯಾದಲ್ಲಿ ಇಷ್ಟು ಪ್ರಮಾಣದ ಮತದಾನವಾಗಿದೆ. ಈ ವಾರ್ಡ್‍ನಲ್ಲಿ ಇಷ್ಟು ಮತದಾನವಾಗಿದೆ. ಆ ಹಳ್ಳಿಯಲ್ಲಿ ಇಷ್ಟು ಮತದಾನವಾಗಿದೆ. ಆ ಭಾಗದಲ್ಲಿ ನಮಗೆ ಮತಗಳು ಬಂದೇ ಇಲ್ಲ. ಇನ್ನು ಹಲವಾರು ಹಳ್ಳಿಗಳಲ್ಲಿ ಸಂಪೂರ್ಣ ಮತ ನಮ್ಮದೇ ಎಂಬ ಇತ್ಯಾದಿ ಅಂಶಗಳ ರಾಜಕೀಯ ಲೆಕ್ಕಾಚಾರ, ಚೆರ್ಚೆಗಳು ನಡೆಯುತ್ತಿವೆ.

ಹೈವೋಲ್ಟೇಜ್ ಕ್ಷೇತ್ರಗಳಾದ ಚಾಮುಂಡೇಶ್ವರಿ, ಚನ್ನಪಟ್ಟಣ, ಬಾದಾಮಿ ಕ್ಷೇತ್ರಗಳಲ್ಲೂ ಇದೇ ರೀತಿ ರಾಜಕೀಯ ಲೆಕ್ಕಾಚಾರ ನಡೆಯುತ್ತಿದ್ದು, ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾನವಾಗಿರುವ ಪ್ರಮಾಣ ಹೋಬಳಿ, ಹಳ್ಳಿಗಳ ಮತಗಟ್ಟೆಗಳಲ್ಲಿ ಮತದಾನವಾಗಿರುವ ಶೇಕಡಾವಾರು ಪ್ರಮಾಣ, ಇವುಗಳ ಮಾಹಿತಿ ತರಿಸಿಕೊಂಡು ಚರ್ಚಿಸುತ್ತಿದ್ದಾರೆ.

ಯಾವ ಭಾಗದಲ್ಲಿ ಯಾವ ಜಾತಿ ಜನ ಎಷ್ಟಿದ್ದಾರೆ, ಯ್ಯಾವ್ಯಾವ ಜನರ ನಾಡಿ ಮಿಡಿತ ಹೇಗಿದೆ. ಚುನಾವಣೆ ಹೇಗಾಗಿರಬಹುದು ಎಂಬ ಭಾರಿ ಚರ್ಚೆ ಕೂಡ ನಡೆಯುತ್ತಿದೆ.

ಇದೇ ರೀತಿ ಬಾದಾಮಿಯಲ್ಲಿ ಶ್ರೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ ಲೆಕ್ಕಾಚಾರದ ಚರ್ಚೆ ತೀವ್ರಗೊಂಡಿದೆ. ಇಬ್ಬರು ಈ ಕ್ಷೇತ್ರದಿಂದ ಪ್ರಥಮವಾಗಿ ಸ್ಪರ್ಧಿಸಿದ್ದಾರೆ. ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಾಗಿದೆ. ಯಾವ ಹೋಬಳಿ, ಯಾವ ಮತಗಟ್ಟೆಗಳಿಂದ ಎಷ್ಟೆಷ್ಟು ನಮ್ಮ ಪಕ್ಷಗಳಿಗೆ ಬಂದಿರಬಹುದೆಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಅದೇ ರೀತಿ ಜೆಡಿಎಸ್ ಪಕ್ಷದವರು ಕೂಡ ಸಂಭಾವ್ಯ ಗೆಲುವಿನ ಅಭ್ಯರ್ಥಿಗಳ ಪಟ್ಟಿ ಮಾಡಿಕೊಂಡು ಗೆಲುವಿನ ಸಾಧ್ಯತೆಯ ಕುರಿತು ಲೆಕ್ಕಾಚಾರ ಹಾಕುತ್ತಿದ್ದಾರೆ. ಹಳೆಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಬಹುದೆಂಬ ನಿರೀಕ್ಷೆ ಹೊಂದಿರುವುದರ ಜತೆಗೆ ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲೂ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಮೆರೆಯುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿದೆ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರುಗಳು ತಾವು ಮಾಡಿದ ರ್ಯಾಲಿ, ಬಹಿರಂಗ ಸಮಾವೇಶ, ಯಾತ್ರೆ, ರೋಡ್ ಶೋ ಮುಂತಾದವುಗಳಿಂದ ತಮಗಾಗಬಹುದಾದ ರಾಜಕೀಯ ಲಾಭದ ಲೆಕ್ಕಾಚಾರ ಹಾಕುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಹೋದ ಮೇಲೆ ಬಿಜೆಪಿಯವರ ಮತಗಳ ಪ್ರಮಾಣ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಬಿಜೆಪಿಯವರದ್ದಾಗಿದೆ. ರಾಹುಲ್‍ಗಾಂಧಿ ಅವರು ನಡೆಸಿದ ಜನಾಶೀರ್ವಾದ ಯಾತ್ರೆ, ಚುನಾವಣಾ ಪ್ರಚಾರ, ಬಹಿರಂಗ ಸಭೆ, ಸರ್ಕಾರದ ಸಾಧನೆಗಳು ನಮಗೆ ವರದಾನವಾಗುತ್ತದೆ ಎಂಬುದು ಕಾಂಗ್ರೆಸ್‍ನ ಲೆಕ್ಕಾಚಾರವಾಗಿದೆ.

ಅದೇ ರೀತಿ ಜೆಡಿಎಸ್‍ನವರು ವಿಕಾಸಪರ್ವದ ಮೂಲಕ ರಾಜ್ಯಾದ್ಯಂತ ಯಾತ್ರೆ ನಡೆಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರು ಬಿಎಸ್‍ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದಿರುವುದಲ್ಲದೆ, ಅಲ್ಪಸಂಖ್ಯಾತ ಮತಗಳನ್ನು ಪಡೆಯಲು ಭಾರೀ ಕಸರತ್ತು ನಡೆಸಿದ್ದರು.
ಓವೈಸಿ ಅವರನ್ನು ಕರೆಸಿ ತಮ್ಮ ಪಕ್ಷದ ಪರ ಪ್ರಚಾರ ಮಾಡಿದ್ದರು. ಅಲ್ಲದೆ ಸಾಕಷ್ಟು ರ್ಯಾಲಿ, ರೋಡ್ ಶೋ ನಡೆಸಿದ್ದಾರೆ. ಇವುಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಎಲ್ಲಾ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನಮಗೆ ಹೆಚ್ಚು ಸ್ಥಾನ ಬರಬಹುದೆಂಬುದು ಜೆಡಿಎಸ್‍ನದ್ದಾಗಿದೆ. ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಯಾವ ಪಕ್ಷ ಗೆಲ್ಲಲಿದೆ, ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆಯೇ, ಇಲ್ಲದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆಯೂ ಕೂಡ ಚರ್ಚೆ ನಡೆಯುತ್ತಿದೆ.

ಅತಂತ್ರ ಪರಿಸ್ಥಿತಿಯಾದರೆ ಯಾವ ರೀತಿ ಮುಂದುವರೆಯಬೇಕು ಎಂಬ ಬಗ್ಗೆಯೂ ಕೂಡ ಪಕ್ಷದ ರಾಷ್ಟ್ರೀಯ ನಾಯಕರು ಚರ್ಚೆ ನಡೆಸಿದ್ದಾರೆ. ಅತ್ತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಳಿನ ಮತ ಎಣಿಕೆಯಲ್ಲಿ ನಾವು ಗೆಲ್ಲುವಂತಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ನಾಳೆ ಬೆಳಗ್ಗೆ 8ರಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12ಗಂಟೆಗೆ ಸ್ಪಷ್ಟ ಚಿತ್ರಣ ಹೊರ ಬೀಳುವ ಸಾಧ್ಯತೆ ಇದೆ. ಯಾರನ್ನು ಜನ ತಿರಸ್ಕರಿಸಿದ್ದಾರೆ, ಯಾರಿಗೆ ಮಣೆ ಹಾಕಿದ್ದಾರೆ ಎಂಬ ಬಗ್ಗೆ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾಯಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ