ಮರು ಮತದಾನ

ಬೆಂಗಳೂರು, ಮೇ 14-ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್‍ನಲ್ಲಿ ತಾಂತ್ರಿಕ ದೋಷ ಉಂಟಾಗಿ ಮತದಾನ ಸ್ಥಗಿತಗೊಳಿಸಲಾಗಿದ್ದ ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆ 2ರಲ್ಲಿ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನೆರಾಳ ಗ್ರಾಮದ ಮತಗಟ್ಟೆಯಲ್ಲಿ ಇಂದು ಮರು ಮತದಾನ ನಡೆಯಿತು.

ಲೊಟ್ಟೆಗೊಲ್ಲಹಳ್ಳಿಯಲ್ಲಿ ಇಂದು ಬೆಳಗಿನಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಮತಗಟ್ಟೆಯಲ್ಲಿ 1,444 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು.

ಮೇ 12 ರಂದು ಮತದಾನ ನಡೆದ ಸಂದರ್ಭದಲ್ಲಿ ಈ ಮತಗಟ್ಟೆಯ ವಿವಿ ಪ್ಯಾಟ್‍ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅಂದು ಮತದಾನ ಸ್ಥಗಿತಗೊಳಿಸಲಾಗಿತ್ತು.

ಅದೇರೀತಿ ಮನ್ನೆರಾಳ ಮತಗಟ್ಟೆ ಸಂಖ್ಯೆ 20 ಮತ್ತು 21 ರಲ್ಲಿ ಇಂದು ಮರು ಮತದಾನ ನಡೆಯಿತು.

ಈ ಮತಗಟ್ಟೆಗಳಲ್ಲಿ ಶೇ.100ಕ್ಕಿಂತ ಹೆಚ್ಚು ಮತದಾನವಾಗಿದ್ದ ಹಿನ್ನೆಲೆಯಲ್ಲಿ ಮತದಾನ ರದ್ದುಪಡಿಸಿ ಇಂದು ಮರುಮತದಾನ ನಡೆಸಲಾಯಿತು.
ಕೊಪ್ಪಳ ಜಿಲ್ಲಾಧಿಕಾರಿ ಕನಗವಲ್ಲಿ ಅವರು ಮರುಮತದಾನಕ್ಕೆ ಆದೇಶಿಸಿದ್ದರು.

ಲೊಟ್ಟೆಗೊಲ್ಲಹಳ್ಳಿ ಹಾಗೂ ಮನ್ನೆರಾಳ ಗ್ರಾಮದಲ್ಲಿ ಮತದಾನ ಈ ತನಕ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಚುನಾವಣಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ