ವಿದ್ಯುತ್ ಬಿಸಿ- ಕನಿಷ್ಠ 20ರಿಂದ ಗರಿಷ್ಠ 60 ಪೈಸೆವರೆಗೂ ಏರಿಕೆ

ಬೆಂಗಳೂರು, ಮೇ 14- ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದ ಜನರಿಗೆ ವಿದ್ಯುತ್ ಏರಿಕೆಯ ಬಿಸಿ ತಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಕನಿಷ್ಠ 20ರಿಂದ ಗರಿಷ್ಠ 60 ಪೈಸೆವರೆಗೂ ಪ್ರತಿ ಯೂನಿಟ್ ದರ ಏರಿಕೆಗೆ ಅನುಮತಿ ನೀಡಿದೆ. ಈ ದರ ಪರಿಷ್ಕರಣೆ ಏ.1ರಿಂದ ಪೂರ್ವಾನ್ವಯಗೊಳ್ಳಲಿದೆ ಎಂದು ಆಯೋಗದ ಅಧ್ಯಕ್ಷ ಶಂಕರ್‍ಲಿಂಗೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಪ್ರತಿ ಯೂನಿಟ್‍ಗೆ 82 ಪೈಸೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೆಇಆರ್‍ಸಿ ಪ್ರತಿ ಯೂನಿಟ್‍ಗೆ ಶೇ.13ಕ್ಕೆ ಏರಿಕೆಗೆ ಅನುಮತಿ ಕೊಟ್ಟಿದ್ದೇವೆ. ಮೆಸ್ಕಾಂ 1ರೂ. 23ಪೈಸೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಶೇ.19ರಷ್ಟು ಏರಿಕೆಗೆ ಅನುಮತಿ ನೀಡಲಾಗಿದೆ. ಚೆಸ್ಕಾಂ 1.13ರೂ. ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಶೇ.18ರಷ್ಟು ಏರಿಕೆಗೆ ಅನುಮತಿ ನೀಡಲಾಗಿದೆ. ಹೆಸ್ಕಾಂ 1.23ರೂ.ಗೆ ಏರಿಕೆಗೆ ಅನುಮತಿ ಕೇಳಿತ್ತು. ಶೇ.19ರಷ್ಟು ಏರಿಕೆಗೆ ಅನುಮತಿ ನೀಡಲಾಗಿದೆ, ಜೆಸ್ಕಾಂ 1ರೂ. 62ಪೈಸೆಗೆ ಏರಿಕೆಗೆ ಅನುಮತಿ ಕೇಳಿತ್ತು. ಶೇ.26ರಷ್ಟು ಏರಿಕೆಗೆ ಅನುಮತಿ ನೀಡಲಾಗಿದೆ. ಈ ವರ್ಷದ ದರ ಏರಿಕೆ ಪ್ರಮಾಣ ಕಳೆದ ವರ್ಷಕ್ಕಿಂತಲೂ ಶೇ.5.93ರಷ್ಟು ಹೆಚ್ಚಾಗಿದೆ. ಮಾ.31ಕ್ಕೆ ಹಳೆಯ ದರಗಳು ಅಂತ್ಯಗೊಳ್ಳಲಿದ್ದು, ಏ.1ರಂದು ಪರಿಷ್ಕøತ ದರಗಳು ಜಾರಿಗೆ ಬರಲಿದೆ ಎಂದರು.
ಈವರೆಗೂ ಏಕರೂಪ ದರ ಏರಿಕೆ ಮಾಡಲಾಗುತ್ತಿದ್ದು, ಈ ಬಾರಿ ಬೆಸ್ಕಾಂನಲ್ಲಿ ಸ್ವಲ್ಪ ವಿಭಿನ್ನವಾದ ಏರಿಕೆಗೆ ಅನುಮತಿ ಕೊಟ್ಟು ಉಳಿದ ಎಲ್ಲಾ ಎಸ್ಕಾಂಗಳಿಗೆ ಏಕರೂಪ ದರವನ್ನು ಅನುಮೋದಿಸಲಾಗಿದೆ ಎಂದು ವಿವರಿಸಿದರು.

ಗೃಹೋಪಯೋಗಿ ವಿದ್ಯುತ್ ದರವನ್ನು ಪ್ರತಿ ಯೂನಿಟ್‍ಗೆ 25ಪೈಸೆಯಷ್ಟು ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.20ರಷ್ಟು, ನಗರ ಪ್ರದೇಶದಲ್ಲಿ ಶೇ.25ರಷ್ಟು ದರ ಏರಿಕೆಯಾಗುತ್ತಿದೆ. ಕೈಗಾರಿಕೆಗಳಿಗೆ ಪ್ರತಿ ಯೂನಿಟ್‍ಗೆ 20ಪೈಸೆಯಿಂದ 30ಪೈಸೆವರೆಗೂ ಹೆಚ್ಚಳವಾಗುತ್ತದೆ. ಇದರ ಜತೆಗೆ ಕೈಗಾರಿಕೆಗಳು ರಾತ್ರಿ 10ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಬಳಸುವ ವಿದ್ಯುತ್‍ಗೆ ಪ್ರತಿ ಯೂನಿಟ್‍ಗೆ 2ರೂ.ನ ರಿಯಾಯ್ತಿ ನೀಡಲಾಗುತ್ತಿದೆ. ವಾಣಿಜ್ಯ ಬಳಕೆಯ ವಿದ್ಯುತ್‍ಗೆ 25ರಿಂದ 35 ಪೈಸೆ ದರ ಹೆಚ್ಚಳವಾಗಲಿದೆ ಎಂದರು.

ನೀರು ಸರಬರಾಜು ವ್ಯವಸ್ಥೆ ನಗರದಲ್ಲಿರಲಿ ಅಥವಾ ಗ್ರಾಮೀಣ ಭಾಗದಲ್ಲಿರಲಿ ಪ್ರತಿ ಯೂನಿಟ್‍ಗೆ ಕೇವಲ 15 ಪೈಸೆಯನ್ನು ಮಾತ್ರ ಹೆಚ್ಚಳ ಮಾಡಲಾಗಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಬಳಸುವ ವಿದ್ಯುತ್‍ಗೆ ವಾಣಿಜ್ಯ ದರವನ್ನು ನಿಗದಿ ಮಾಡಲಾಗಿತ್ತು. ಅದು ಸರಿ ಸುಮಾರು 8ರೂ.ಗಳಷ್ಟಿತ್ತು. ಅದನ್ನು ಬದಲಾವಣೆ ಮಾಡಿ ಗೃಹೋಪಯೋಗಿ ಸಂಸ್ಕರಣಾ ಘಟಕಗಳಿದ್ದರೆ ಗೃಹೋಪಯೋಗಿ ದರ, ವಾಣಿಜ್ಯ ಬಳಕೆಯ ಘಟಕಗಳಿದ್ದರೆ ವಾಣಿಜ್ಯ ವಿಭಾಗಕ್ಕೆ ನಿಗದಿಪಡಿಸುವ ದರವನ್ನೇ ಅನ್ವಯಗೊಳಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಇನ್ನು ಮೆಟ್ರೋ ಸಂಚಾರ ಹೆಚ್ಚಾದರೆ ನಗರ ಪ್ರದೇಶದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಮತ್ತು ಕಾರ್ಬನ್ ಪ್ರಮಾಣ ಇಳಿಮುಖವಾಗಿ ವಾಯುಮಾಲಿನ್ಯ ತಗ್ಗಲಿದೆ. ಹಾಗಾಗಿ ಮೆಟ್ರೋ ಬಳಸುವ ವಿದ್ಯುತ್‍ಗೆ ಬಿಎಂಆರ್‍ಸಿಎಲ್ ಮನವಿ ಮೇರೆಗೆ ಒಂದು ರೂ. ಕಡಿಮೆ ಮಾಡಲಾಗಿದೆ. ಪ್ರತಿ ಯೂನಿಟ್‍ಗೆ 6ರೂ. ನಿಂದ 5ರೂ.ಗೆ ಇಳಕೆಯಾಗಿದೆ.

ರಾಜ್ಯದ ಎಲ್ಲಾ ರೈಲ್ವೆ ಮಾರ್ಗಗಳು ವಿದ್ಯುದ್ದೀಕರಣಗೊಳ್ಳಬೇಕು ಎಂಬ ಆಶಯದಿಂದ 40ಪೈಸೆ ರಿಯಾಯ್ತಿ ಘೋಷಿಸಲಾಗಿದೆ. ರಾಜ್ಯಾದ್ಯಂತ ಯಾವುದೇ ಹೆಸ್ಕಾಂಗಳಿದ್ದರೂ ರೈಲ್ವೆ ಇಲಾಖೆ ಪ್ರತಿ ಯೂನಿಟ್‍ಗೆ 6ರೂ. ಪಾವತಿಸಿದರೆ ಸಾಕು ಎಂದು ಅವರು ಹೇಳಿದರು.

ವಿದ್ಯುತ್ ವಾಹನಗಳ ಸಂಚಾರವನ್ನು ಪೆÇ್ರೀ ಭಾರೀ ರಿಯಾಯ್ತಿಯನ್ನು ಕೆಇಆರ್‍ಸಿ ಘೋಷಿಸಿದೆ. ವಿದ್ಯುತ್ ವಾಹನಗಳ ಚಾರ್ಜಿಂಗ್ ಘಟಕದಲ್ಲಿ ಪ್ರತಿ ಯೂನಿಟ್ ದರವನ್ನು 8ರೂ.ನಿಂದ 4.80 ಪೈಸೆಗೆ ಇಳಿಸಲಾಗಿದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಪಂಪ್‍ಸೆಟ್‍ಗಳಿಗೆ 21,500 ದಶಲಕ್ಷ ಯೂನಿಟ್ ವಿದ್ಯುತ್ ಬಳಸಲಾಗುತ್ತಿದೆ. ಇದು ಒಟ್ಟಾರೆ ವಿದ್ಯುತ್ ಬಳಕೆಯ ಶೇ.32ರಷ್ಟು ಪಾಲು ಪಡೆದಿದೆ.

ರಾಜ್ಯ ಸರ್ಕಾರ ಕೃಷಿ ಪಂಪ್‍ಸೆಟ್‍ಗೆ 8040ಕೋಟಿ ರಿಯಾಯ್ತಿ ಹಣ ಬಿಡುಗಡೆ ಮಾಡಿದೆ. ಆದರೆ, ಪಂಪ್‍ಸೆಟ್‍ನ ರಿಯಾಯ್ತಿ 11040ರಷ್ಟಾಗಿದೆ. ಬಾಕಿ ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಕೆಇಆರ್‍ಸಿ ಆದೇಶಿಸಿದೆ ಎಂದು ಹೇಳಿದರು.

ಕೃಷಿಗೆ 6ಗಂಟೆ ತ್ರಿಪೇಸ್ ವಿದ್ಯುತ್ ನೀಡುತ್ತಿದೆ. ಈಗ ಅದನ್ನು ರಾತ್ರಿ ವೇಳೆಯಷ್ಟೇ ಪೂರೈಸಲಾಗುತ್ತಿದೆ. ಇನ್ನು ಮುಂದೆ ಬೆಳಗ್ಗೆ 3 ಗಂಟೆ, ರಾತ್ರಿ ಮೂರು ಗಂಟೆ ಪೂರೈಸುವಂತೆ ಸೂಚಿಸಲಾಗಿದೆ. ಅಕ್ಟೋಬರ್ ನಂತರ ಸೋಲಾರ ವಿದ್ಯುತ್ ಹೆಚ್ಚಾಗಿ ಲಭ್ಯವಾಗುವುದರಿಂದ ಹಗಲು ವೇಳೆಯೇ ವಿದ್ಯುತ್ ಪೂರೈಸಬಹುದು. ನವೆಂಬರ್ ನಂತರ ಬೆಳಗ್ಗೆ 10ರಿಂದ 4ಗಂಟೆಯ ನಡುವೆಯೇ ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ಪೂರೈಸುವಂತೆ ತಾಕೀತು ಮಾಡಲಾಗಿದೆ.

ಈವರೆಗೆ ರಾಜ್ಯದಲ್ಲಿ 4500 ಮೆಗಾವ್ಯಾಟ್ ಸೋಲಾರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅದು ಅಕ್ಟೋಬರ್ ನಂತರ 5ಸಾವಿರ ಮೆಗಾವ್ಯಾಟ್‍ಗೆ ಹೆಚ್ಚಳವಾಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಸರಬರಾಜು ಮತ್ತು ಪೂರೈಕೆ ನಷ್ಟದ ಪ್ರಮಾಣ ಶೇ.15ರ ಮಿತಿಯಲ್ಲಿರಬೇಕು. ಆದರೆ, ಈಗ ರಾಜ್ಯದಲ್ಲಿ ಅದು ಶೇ.11ರಿಂದ 17ರಷ್ಟಿದೆ. 2019ರ ವೇಳೆಗೆ ಇದನ್ನು ಶೇ.15ರೊಳಗೆ ನಿಯಂತ್ರಿಸದೇ ಇದ್ದರೆ ಈಗ ಜಾರಿಯಲ್ಲಿರುವ ವಿದ್ಯುತ್ ದರದ ಮೇಲೆ ದಂಡ ವಿಧಿಸುವುದಾಗಿ ಅವರು ಎಚ್ಚರಿಸಿದರು.

ಯಾವ ಒತ್ತಡಕ್ಕೂ ಮಣಿಯುವುದಿಲ್ಲ:
ವಿದ್ಯುತ್ ದರ ಏರಿಕೆಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಅದು ಸುಳ್ಳು. ನಾವು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ದರ ಪರಿಷ್ಕರಣೆಯನ್ನು ಪ್ರಕಟಿಸಿರಲಿಲ್ಲ. ನೀತಿ ಸಂಹಿತೆ ಮುಕ್ತಾಯಗೊಂಡಿದ್ದರಿಂದ ದರ ಏರಿಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಇನ್ನು ಮುಂದೆ ರಾಜ್ಯ ಸರ್ಕಾರ ತನ್ನ ಮನಸೋಇಚ್ಚೆ ದರ ನಿಗದಿ ಮಾಡಿ ವಿದ್ಯುತ್ ಖರೀದಿ ಮಾಡುವಂತಿಲ್ಲ ಎಂದು ಕೆಇಆರ್‍ಸಿ ಆದೇಶಿಸಿದೆ. ಈವರೆಗೂ ರಾಜ್ಯ ಸರ್ಕಾರ ವಿದ್ಯುತ್ ಅಭಾವವಾದಾಗ ತನಗೆ ಇಷ್ಟಾನುಸಾರ ದರ ನಿಗದಿ ಮಾಡಿ ಮಾರುಕಟ್ಟೆಯಲ್ಲಿ ಖರೀದಿ ಮಾಡುತ್ತಿತ್ತು. ಇನ್ನು ಮುಂದೆ ಆ ರೀತಿ ಮಾಡಲು ಸಾಧ್ಯವಿಲ್ಲ. ಎಲ್ಲಾ ವಿದ್ಯುತ್ ಖರೀದಿಯನ್ನು ಬಿಡ್ ಮೂಲಕವೇ ಮಾಡಬೇಕು. ಟೆಂಡರ್ ದರದಂತೆಯೇ ವಿದ್ಯುತ್ ಖರೀದಿಯಾಗಬೇಕು. ಸಣ್ಣ ಪ್ರಮಾಣದ ಖರೀದಿಗೆ ರಿಯಾಯ್ತಿ ನೀಡಲಾಗುತ್ತದೆ. ಆದರೆ, ದೊಡ್ಡ ಪ್ರಮಾಣದ ಖರೀದಿಯನ್ನು ಟೆಂಡರ್ ಮೂಲಕವೇ ಮಾಡಬೇಕೆಂದು ಕೆಇಆರ್‍ಸಿ ಆದೇಶಿಸಿದೆ ಎಂದರು.
ಪಾವಗಡದ ಸೋಲಾರ ವಿದ್ಯುತ್ ಖರೀದಿಗೆ ಬಿಡ್ ಮಾಡಿದಾಗ 2ರೂ.93 ಪೈಸೆ ಕಡಿಮೆ ದರಕ್ಕೆ ನಿಗದಿಯಾಗಿದೆ. ಅದನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರೆ ಹೆಚ್ಚಾಗುವ ಸಾಧ್ಯತೆ ಇತ್ತು. ಹಾಗಾಗಿ ಇನ್ನು ಮುಂದೆ ಬಿಡ್ ಮೂಲಕವೇ ವಿದ್ಯುತ್ ಖರೀದಿ ಮಾಡುವಂತ ಶಂಕರ್‍ಲಿಂಗೇಗೌಡ ತಾಕೀತು ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ