
ನವದೆಹಲಿ, ಮೇ 14- ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ 19 ದಿನಗಳ ಬಳಿಕ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.
ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 17 ಪೈಸೆ ಹಾಗೂ ಡೀಸೆಲ್ ದರ ಲೀಟರ್ಗೆ 21 ಪೈಸೆಗಳಷ್ಟು ಹೆಚ್ಚಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಧನ ದರ ಏರಿಕೆ ಮಾಡುವ ತಂಟೆಗೆ ಹೋಗಿರಲಿಲ್ಲ.
ಅಂತಾರಾಷ್ಟ್ರೀಯ ತೈಲ ದರಗಳ ಏರಿಕೆಯಿಂದಾಗಿ ಸಾರ್ವಜನಿಕ ವಲಯದ ತೈಲ ಸಂಸ್ಥೆಗಳು ಈಗ ಬಳಕೆದಾರರಿಗೆ ಇಂಧನ ಬೆಲೆ ಹೆಚ್ಚಳದ ಬಿಸಿ ಮುಟ್ಟಿಸಿವೆ.
ರಾಜಧಾನಿ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ಗೆ 74.80 ರೂ.ಗಳಿವೆ (ಹಿಂದಿನ ದರ 74.63) ಹಾಗೂ ಡೀಸೆಲ್ ದರವನ್ನು 65.93 ರೂ.ಗಳಿಂದ 66.14 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಡೀಸೆಲ್ ಬೆಲೆಯು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದರೆ, ಪೆಟ್ರೋಲ್ ದರ 56 ತಿಂಗಳಲ್ಲೇ ಅತ್ಯಧಿಕ ಎನಿಸಿದೆ.