ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ: ಉತ್ತರಪ್ರದೇಶದ ಮೈತ್ರಿಗೆ ಸತ್ವ ಪರೀಕ್ಷೆ

ಲಕ್ನೋ, ಮೇ 14- ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ಮುನ್ನ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ಸಂಭವನೀಯ ಮೈತ್ರಿಗೆ ಸತ್ವ ಪರೀಕ್ಷೆಯಾಗಲಿದೆ.
ಎಸ್‍ಪಿ ಮುಖಂಡ ಅಖಿಲೇಶ್ ಯಾದವ್ ಹಾಗೂ ಬಿಎಸ್‍ಪಿ ನಾಯಕಿ ಮಾಯಾವತಿ ಫಲಿತಾಂಶವನ್ನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ(ಜೆಡಿಎಸ್) ಹೊಸ ಸರ್ಕಾರ ರಚನೆಯಲ್ಲಿ ಕಿಂಗ್‍ಮೇಕರ್ ಆಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಸ್‍ಪಿ ತೀವ್ರ ನಿಗಾ ವಹಿಸಿದೆ.
ಕರ್ನಾಟಕ ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಉತ್ತರ ಪ್ರದೇಶದ ಈ ಎರಡು ಪ್ರಾದೇಶಿಕ ಪಕ್ಷಗಳ ರಾಜಕೀಯ ಭವಿಷ್ಯವೂ ಅವಲಂಬಿತವಾಗಿದೆ.
ಕರ್ನಾಟದಲ್ಲಿ ಬಿಜೆಪಿ ಜೊತೆ ಸರ್ಕಾರ ರಚಿಸಲು ಜೆಡಿಎಸ್ ಮತ್ತು ಬಿಎಸ್‍ಪಿ ಕೈಜೋಡಿಸಿದ್ದೇ ಆದರೆ, ಉತ್ತರ ಪ್ರದೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮೈತ್ರಿಗೆ ಧಕ್ಕೆಯಾಗಲಿದೆ.
ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳು ಬಿಜೆಪಿಯನ್ನು ರಾಜಕೀಯ ಬದ್ಧ ವೈರಿ ಎಂದು ಪರಿಗಣಿಸಿದ್ದು, ಚುನಾವಣೆ ನಂತರ ಮುಂದಿನ ಬೆಳವಣಿಗೆ ಅಪಾರ ಕುತೂಹಲ ಕೆರಳಿಸಿದೆ.  ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸಲು ಮುಂದಾದರೆ, ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಹಿತಾಸಕ್ತಿ ಬಲಿಕೊಟ್ಟು ಆ ಮೈತ್ರಿಕೂಟದೊಂದಿಗೆ ಮಾಯಾವತಿ ಕೈಜೋಡಿಸುವ ಸಾಧ್ಯತೆಗಳಿಲ್ಲ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರೇ ಹೇಳುತ್ತಿದ್ದಾರೆ. ಹೊಸ ಸರ್ಕಾರ ರಚನೆಗಾಗಿ ತಾವು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳುತ್ತಲೇ ಬಂದಿದ್ದಾರೆ.  ಸಮ್ಮಿಶ್ರ ಸರ್ಕಾರ ರಚನೆಗೆ ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗೂಡಿದರೆ, ದಲಿತ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಭರವಸೆ ಮೂಲಕ ಜನತಾದಳದ ಮನವೊಲಿಸಲು ಕಾಂಗ್ರೆಸ್ ಯತ್ನಿಸಲಿದೆ ಎಂದು ವರದಿಗಳು ಹೇಳಿವೆ.
ಮಾಯಾವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಸಕ್ಕರೆ ಗಿರಣಿಗಳ ಮಾರಾಟದಲ್ಲಿ ಭಾರೀ ಅಕ್ರಮ-ಅವ್ಯವಹಾರಗಳು ನಡೆದ ಆರೋಪಗಳ ಮೇಲೆ ಸಿಬಿಐ ತನಿಖೆಯಲ್ಲಿರುವ ಮಯಾವತಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಜೊತೆ ಕೈಜೋಡಿಸುವ ಸಾಧ್ಯತೆ ತೀರಾ ಕಡಿಮೆ. ಒಟ್ಟಾರೆ ನಾಳೆಯ ಫಲಿತಾಂಶದ ಮೇಲೆ ಉತ್ತರ ಪ್ರದೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮುಂದಿನ ಚುನಾವಣಾ ಮೈತ್ರಿ ನಿರ್ಧಾರವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ