
ತುಮಕೂರು, ಮೇ 14-ಎಚ್‍ಡಿಎಫ್‍ಸಿ ಬ್ಯಾಂಕ್‍ನ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ ಎಸ್‍ಎಸ್‍ಐಟಿ ಕಾಲೇಜು ಸಮೀಪ ನಡೆದಿದೆ.
ತಡರಾತ್ರಿ 2.30ರ ಸುಮಾರಿಗೆ ಎಟಿಎಂ ಕೇಂದ್ರದ ಒಳ ನುಗ್ಗಿದ ಚೋರರು ಆರೆ, ಕಟರ್, ಸುತ್ತಿಗೆಯಿಂದ ಯಂತ್ರವನ್ನು ಜಖಂಗೊಳಿಸಿದ್ದಾರೆ. ಆದರೆ ಹಣವಿದ್ದ ಬಾಕ್ಸ್ ಮಾತ್ರ ಓಪನ್ ಆಗಿಲ್ಲ. ಅಷ್ಟೊತ್ತಿಗಾಗಲೇ ಈ ಎಲ್ಲಾ ಶಬ್ಧಗಳಿಂದ ಎಚ್ಚೆತ್ತ ಅಕ್ಕಪಕ್ಕದ ನಿವಾಸಿಗಳು ಬರುವುದನ್ನು ಗಮನಿಸಿ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಎಟಿಎಂ ಕೇಂದ್ರಕ್ಕೆ ಯಾವುದೇ ಸೆಕ್ಯೂರಿಟಿ ಗಾರ್ಡ್ ಇಲ್ಲದಿರುವುದನ್ನು ಮನಗಂಡ ಚೋರರು ಕಳ್ಳತನಕ್ಕೆ ಯತ್ನಿಸಿದ್ದಾರೆ. ಯಂತ್ರದಲ್ಲಿ ಸುಮಾರು 15 ಲಕ್ಷ ಹಣವಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಜಯನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ನವೀನ್, ಬೆರಳಚ್ಚು ತಂಡ, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೃತ್ತ ನಿರೀಕ್ಷಕ ರಾಧಾಕೃಷ್ಣ, ಡಿವೈಎಸ್ಪಿ ನಾಗರಾಜ್ ಇವರುಗಳು ಕಳ್ಳರ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ.