ವಿಧಾನಸೌಧ ಮತ್ತು ಶಕ್ತಿಸೌಧದ ಕಚೇರಿಗಳು ನವೀಕರಣ – ಮತ್ತೊಂದೆಡೆ ಕಚೇರಿ ತೆರವುಗೊಳಿಸಲು ಸಿಬ್ಬಂದಿ ಸಿದ್ಧತೆ

ಬೆಂಗಳೂರು,ಮೇ14- ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧ ಮತ್ತು ಶಕ್ತಿಸೌಧದಲ್ಲಿರುವ ಸಚಿವರ ಕಚೇರಿಗಳು ಒಂದೆಡೆ ನವೀಕರಣವಾಗುತ್ತಿದ್ದರೆ ಮತ್ತೊಂದೆಡೆ ಕಚೇರಿ ತೆರವುಗೊಳಿಸಲು ಸಿಬ್ಬಂದಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಸಚಿವರ ಕಚೇರಿಗಳಲ್ಲಿ ಕೆಲಸದ ಒತ್ತಡ ಗಣನೀಯವಾಗಿ ಇಳಿಕೆಯಾಯಿತು. ಸಚಿವರು, ಶಾಸಕರು ಕೂಡ ಶಕ್ತಿಸೌಧದತ್ತ ಆಗಮಿಸುವುದು ತೀರಾ ವಿರಳವಾಯಿತು.

ಸುಮಾರು ಒಂದೂವರೆ ತಿಂಗಳಿನಿಂದ ಸಾರ್ವಜನಿಕರ ಸಂಖ್ಯೆಯೂ ಕಡಿಮೆಯಾಗಿ ಒಂದರ್ಥದಲ್ಲಿ ಬಣಗುಡುತ್ತಿದ್ದವು. ವಿಧಾನಸೌಧದ ಬಹಳಷ್ಟು ಕಚೇರಿಗಳನ್ನು ನವೀಕರಣಗೊಳಿಸಿ ಹೊಸ ಸರ್ಕಾರದ ಆಗಮನಕ್ಕೆ ಅಣಿ ಮಾಡಲಾಗುತ್ತಿದ್ದ ದೃಶ್ಯ ಕಂಡುಬಂತು.

ಬಹಳಷ್ಟು ಸಚಿವರ ಕಚೇರಿಗಳಲ್ಲಿದ್ದ ಕಡತಗಳನ್ನು ವಿಲೇವಾರಿ ಮಾಡುವುದು ಸೇರಿದಂತೆ ಕಚೇರಿ ಖಾಲಿ ಮಾಡಲು ಆಯಾ ಸಚಿವರ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಸಂಜೆಯಷ್ಟರಲ್ಲಿ ಫಲಿತಾಂಶವು ಹೊರಬೀಳಲಿದೆ.

ಫಲಿತಾಂಶ ಬರುತ್ತಿದ್ದಂತೆ ಹಲವು ಸಚಿವರ ಕಚೇರಿಗಳು ಖಾಲಿಯಾಗುವ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿವೆ. ಹೊಸ ಸರ್ಕಾರ ರಚನೆಯಾದ ಮೇಲೆ ಹೊಸ ಸಚಿವರು ಹಾಗೂ ಹೊಸ ಸಿಬ್ಬಂದಿ ಆಗಮನವಾಗಲಿದೆ.

ವಿಧಾನಸೌಧದ ಸಚಿವರ ಕಚೇರಿಗಳಲ್ಲದೆ ಹೊರಭಾಗದ ಪಾರ್ಕ್‍ನ್ನು ಕೂಡ ಹೊಸ ವಿನ್ಯಾಸದಲ್ಲಿ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ವಿರಳವಾಗಿದ್ದ ಸಾರ್ವಜನಿಕರ ಸಂಖ್ಯೆ ಹೊಸ ಸರ್ಕಾರ ಬಂದ ನಂತರ ಹೆಚ್ಚಾಗಲಿದೆ.

ಅಧಿಕಾರಿ ವರ್ಗ, ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ವಿಧಾನಸೌಧದಲ್ಲಿ ಚುನಾವಣಾ ಫಲಿತಾಂಶದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು, ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆಯೇ ಎಂಬಿತ್ಯಾದಿ ಬಗ್ಗೆ ಸಮಾಲೋಚನೆಗಳು ಪರಸ್ಪರ ನಡೆಯುತ್ತಿದ್ದವು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ