ಕಲ್ಬುರ್ಗಿ, ಮೇ 13- ದಲಿತ ಸಿಎಂ ಆಯ್ಕೆ ಮಾಡಲು ಒಮ್ಮತವಿರಬೇಕು. ಅದನ್ನು ಬಿಟ್ಟು ಸುಖಾಸುಮ್ಮನೆ ಹೇಳಿಕೆ ನೀಡುವುದು ತರವಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಅಭಿಪ್ರಾಯಪಟ್ಟರು.
ದಲಿತ ಸಿಎಂ ಆಯ್ಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ಯಾರಾಗಬೇಕೆಂಬುದನ್ನು ಕಾಲ ಬಂದಾಗ ತೀರ್ಮಾನಿಸಲಾಗುವುದು ಎಂದರು.
ನಾನು ಸಿಎಂ ಆಕಾಂಕ್ಷಿಯೂ ಅಲ್ಲ. ಆ ಸ್ಥಾನಕ್ಕೆ ಅರ್ಜಿಯೂ ಹಾಕೋಲ್ಲ. ನನಗೆ ಸಿಎಂ ಸ್ಥಾನ ನೀಡಬೇಕೆಂಬ ಒಮ್ಮತದ ಅಭಿಪ್ರಾಯ ಬಂದರೆ ನೋಡೋಣ ಎಂದು ಹಾರಿಕೆ ಉತ್ತರ ನೀಡಿದರು. ನನ್ನನ್ನು ಕಾಂಗ್ರೆಸ್ ನಾಯಕ ಎಂದು ಕರೆಯಲು ನಾಚಿಕೆಯಾದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಕರೆಯಿರಿ. ಅದೇ ಆಧಾರದ ಮೇಲೆ ನನಗೆ ಸಿಎಂ ಸ್ಥಾನ ನೀಡಿ ಎಂದು ಖರ್ಗೆ ಮಾರ್ಮಿಕವಾಗಿ ನುಡಿದರು. ದಲಿತರಿಗೆ ಸಿಎಂ ಸ್ಥಾನ ನೀಡುವ ಕುರಿತಂತೆ ಚರ್ಚಿಸುವುದಕ್ಕೆ ಇದು ಸೂಕ್ತ ಕಾಲವಲ್ಲ. ಈ ಹಿಂದೆ ಹಲವಾರು ಬಾರಿ ಈ ಬಗ್ಗೆ ಚರ್ಚೆಯಾಗಿದೆ.ಹೀಗಾಗಿ ಕಾಲ ಬಂದಾಗ ಯಾರು ಸಿಎಂ ಆಗಬೇಕು ಎಂಬುದನ್ನು ಶಾಸಕಾಂಗ ಪಕ್ಷದ ಸಭೆ ತೀರ್ಮಾನಿಸಲಿದೆ ಎಂದು ಹೇಳಿದರು.