ಮೈಸೂರು:ಮೇ-13: ಕಾಂಗ್ರೆಸ್ ಹೈಕಮಾಂಡ್ ದಲಿತ ಸಿಎಂ ಮಾಡುತ್ತೇವೆ ಎಂದು ಹೇಳಿದರೆ ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ದಲಿತ ಸಿಎಂ ಮಾಡಬೇಕು ಎಂಬ ಬೇಡಿಕೆಗಳಿಗೆ ನನ್ನ ವಿರೋಧವಿಲ್ಲ. ಈ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡಿದರೆ ನನ್ನ ತಕರಾರಿಲ್ಲ. ಆದರೆ, ದಲಿತ ಸಿಎಂ ಒಮ್ಮೆಲೇ ಮಾಡಲು ಸಾಧ್ಯವಿಲ್ಲ, ಇದಕ್ಕೆ ಶಾಸಕರ ಸಮ್ಮತಿ ಬೇಕು ಎಂದು ಹೇಳಿದ್ದಾರೆ.
ರಾಜ್ಯ ಚುನಾವಣಾ ಫಲಿತಾಂಶ ಲೋಕಸಭೆಯ ಚುನಾವಣೆಗಷ್ಟೇ ಅಲ್ಲ. ದೇಶದ ಇತರೆ ರಾಜ್ಯಗಳ ಚುನಾವಣೆಗೆ ಅಡಿಗಲ್ಲು. ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ರಾಜಸ್ಥಾನ,ಮಧ್ಯಪ್ರದೇಶ ಚುನಾವಣೆ ಬರಲಿದೆ. ಆ ಚುನಾವಣೆಗಳನ್ನ ಗೆದ್ದು ದೇಶವನ್ನು ಹಿಡಿತಕ್ಕೆ ತಗೆದುಕೊಳ್ಳುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು, ನಾನು ಎರಡೂ ಕಡೆಗಳಲ್ಲಿ ಗೆಲ್ಲುವೆ. ಬಾದಾಮಿಯಲ್ಲಿ ಹೆಚ್ಚು ಬಹುಮತ ಬರಲಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೂಡ ಗೆಲ್ಲುವೆ, ಆದ್ರೆ ನಿರೀಕ್ಷೆ ಮಟ್ಟದ ಲೀಡ್ ಬರದಿರಬಹುದು ಎಂದು ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಸಮಿಶ್ರ ಸರ್ಕಾರದ ಬಗ್ಗೆ ವಿವಿಧ ಸರ್ವೆಗಳ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಸಮಿಶ್ರ ಸರ್ಕಾರ ಬರತ್ತೆ ಅನ್ನೋ ಸಮೀಕ್ಷೆ ಸತ್ಯ ಇರಬಹುದು. ಆದರೆ, ಸಂಪೂರ್ಣ ನಂಬಲು ಸಾಧ್ಯವಿಲ್ಲ ಹೇಳಿದ್ದಾರೆ.