ಕೆಲವಡೆÉ ಕೈ ಕೊಟ್ಟ ಮತಯಂತ್ರಗಳು; ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ; ಇಳಿ ವಯಶಸ್ಸಿನಲ್ಲೂ ಮತ ಚಲಾಯಿಸಿ ಯುವಕರಿಗೆ ಮಾದರಿಯಾದ ಸಿದ್ದಗಂಗಾ ಶ್ರೀ

ಬೆಂಗಳೂರು, ಮೇ12- ಕೈ ಕೊಟ್ಟ ಮತಯಂತ್ರಗಳು, ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ, ಹಣ ಹಂಚಿಕೆ ವೇಳೆ ಸಿಕ್ಕಿಬಿದ್ದ ಬೆಂಬಲಿಗರು, ಮತ ಹಾಕದಿದ್ದಕ್ಕೆ ಮನೆ ಮೇಲೆ ದಾಳಿ, ಗುಂಪು ಘರ್ಷಣೆ, ಕೆಲವು ಕಡೆ ಮತದಾನ ಸ್ಥಗಿತ, ಇಳಿ ವಯಸ್ಸಿನಲ್ಲೂ ಮತ ಚಲಾಯಿಸಿ ಯುವಕರಿಗೆ ಮಾದರಿಯಾದ ನಡೆದಾಡುವ ದೇವರು….

ರಾಜ್ಯದ ಮುಂದಿನ ಐದು ವರ್ಷಗಳ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿರುವ 15ನೇ ವಿಧಾನಸಭೆ ಚುನಾವಣೆಗೆ ಇಂದು ನಡೆದ ಮತದಾನದ ವೇಳೆ ಅಲ್ಲಲ್ಲಿ ಕಂಡು ಬಂದ ದೃಶ್ಯಗಳಿವು.
ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ರಾಜ್ಯಾದ್ಯಂತ ಶಾಂತಿಯುತವಾಗಿ ಬಿರುಸಿನ ಮತದಾನ ನಡೆಯುತ್ತಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.50ರಷ್ಟು ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅನೇಕ ನಾಯಕರ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.
ಬಿಜೆಪಿ 222, ಕಾಂಗ್ರೆಸ್ 221, ಜೆಡಿಎಸ್ 201, ಬಿಎಸ್‍ಪಿ 18, ಸಿಪಿಐಎಂ 19, ಎನ್‍ಸಿಪಿ 14, ಪಕ್ಷೇತರರು 1155 ಸ್ಪರ್ಧಾ ಕಣದಲ್ಲಿದ್ದಾರೆ. ಇದರಲ್ಲಿ ಪುರುಷರು 2436 ಹಾಗೂ ಮಹಿಳೆ 219 ಸೇರಿದಂತೆ ಕಣದಲ್ಲಿ ಒಟ್ಟು 2655 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಇದೇ ಮೊದಲ ಬಾರಿಗೆ ಮತದಾರರು ತಾವು ಚಲಾಯಿಸಿದ ಮತದಾನವನ್ನು ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್ ಕೂಡ ಅಳವಡಿಸಲಾಗಿತ್ತು.
ಶಾಂತಿಯುತ ಮತದಾನ:
224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ವಿಧಾನಸಭಾ ಕ್ಷೇತ್ರಗಳಲ್ಲಿ (ಜಯನಗರ ಮತ್ತು ರಾಜರಾಜೇಶ್ವರಿ ನಗರ ಹೊರತುಪಡಿಸಿ) ಮತದಾನದ ವೇಳೆ ಅಲ್ಲಲ್ಲಿ ವಿದ್ಯುನ್ಮಾನ ಯಂತ್ರಗಳ ತಾಂತ್ರಿಕ ಗೊಂದಲ, ಕಾರ್ಯಕರ್ತರ ನಡುವೆ ಘರ್ಷಣೆ, ನಕಲಿ ಮತದಾನಕ್ಕೆ ಯತ್ನ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಘಟನೆಗಳು ನಡೆದಿವೆ.

ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನಕ್ಕೆ ಪ್ರಾರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. ಎಲ್ಲೆಡೆ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ದೃಶ್ಯ ಎಲ್ಲೆಡೆ ಕಂಡುಬಂದಿದ್ದು, ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಳ್ಳಾರಿ, ಕಲ್ಬುರ್ಗಿ ಸೇರಿದಂತೆ ಬಹುತೇಕ ಎಲ್ಲ ಕಡೆ ನಿರೀಕ್ಷೆಗೂ ಮೀರಿದ ಮತದಾನವಾಗಿದೆ.

ನಿನ್ನೆ ರಾಜ್ಯದ ನಾನಾ ಕಡೆ ಮಳೆಯಾಗಿದ್ದರಿಂದ ಮತದಾನಕ್ಕೆ ಅಡ್ಡಿಯಾಗಬಹುದೆಂಬ ಆತಂಕ ಎದುರಾಗಿತ್ತು. ಆದರೆ ಚಿಕ್ಕೋಡಿಯಲ್ಲಿ ಬೆಳಗ್ಗೆ ಜಿಟಿಜಿಟಿ ಮಳೆಯಾಯಿತಾದರೂ 9 ಗಂಟೆಯ ನಂತರ ಮತದಾನ ಪ್ರಾರಂಭವಾಯಿತು. ಉಳಿದಂತೆ ಮತದಾನಕ್ಕೆ ವರುಣ ಎಲ್ಲಿಯೂ ಅಡ್ಡಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಕೈ ಕೊಟ್ಟ ಮತಯಂತ್ರ:
ಕೆಲವು ಕಡೆ ವಿದ್ಯುನ್ಮಾನ ಯಂತ್ರ ಕೈಕೊಟ್ಟಿದ್ದರಿಂದ ಆರಂಭದಲ್ಲಿ ಮತದಾನಕ್ಕೆ ಅಡ್ಡಿಯಾಯಿತು. ಹಾಸನ ಜಿಲ್ಲೆ ಹೊಳೆನರಸೀಪುರದ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಕುಟುಂಬ ಸಮೇತ ಮತ ಚಲಾಯಿಸಲು ಹೋದಾಗ ತಾಂತ್ರಿಕ ದೋಷ ಕಂಡುಬಂದಿತು.
ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಕೂಡಲೇ ಮತಯಂತ್ರವನ್ನು ಬದಲಾಯಿಸಿದರು. ಮತಗಟ್ಟೆ ಸಂಖ್ಯೆ 197ರಲ್ಲಿ ಮತದಾನ ಮಾಡಲು ಬಂದ ವೇಳೆ ಇವಿಎಂ ಕೆಲ ಕಾಲ ಕೈ ಕೊಟ್ಟಿತು. ಸರಿಯಾದ ಬಳಿಕ ಗೌಡರು ತಮ್ಮ ಹಕ್ಕು ಚಲಾಯಿಸಿದರು.
ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ಹುಬ್ಬಳ್ಳಿಯ ಬೂತ್ ನಂ. 108ರಲ್ಲಿ ಮತದಾನ ಮಾಡಲು ಬಂದ ವೇಳೆ ಮತಯಂತ್ರ ಕೈ ಕೊಟ್ಟಿದ್ದರಿಂದ ಸುಮಾರು 20 ನಿಮಿಷಗಳ ಕಾಲ ಸರತಿ ಸಾಲಿನಲ್ಲೇ ನಿಲ್ಲಬೇಕಾಯಿತು.

ನರಗುಂದದ ಮತಗಟ್ಟೆ 73ರಲ್ಲಿ ಇವಿಎಂ ಕೈ ಕೊಟ್ಟ ಕಾರಣ ಮತದಾನ ಅರ್ಧಗಂಟೆ ತಡವಾಗಿ ಆರಂಭವಾಯಿತು. ಇದರಿಂದ ಮತದಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಮತಗಟ್ಟೆ 63ರಲ್ಲಿ ಮತಯಂತ್ರ ಕೈ ಕೊಟ್ಟಿದ್ದರಿಂದ ಮತದಾನ ತಡವಾಗಿ ಪ್ರಾರಂಭವಾಯಿತು. ಹುಬ್ಬಳ್ಳಿಯ ಮತಗಟ್ಟೆ 185ರಲ್ಲಿ ಇವಿಎಂ ಜೊತೆಗೆ ವಿವಿಪ್ಯಾಟ್ ಕೂಡ ತಾಂತ್ರಿಕ ತೊಂದರೆಗೊಳಗಾಗಿದ್ದರಿಂದ ಮತದಾನ ವಿಳಂಬವಾಯಿತು.
ಮಾನ್ವಿ ತಾಲ್ಲೂಕಿನ ಜಕ್ಕಲದಿಣ್ಣೆ ಗ್ರಾಮದ ಮತಗಟ್ಟೆಯಲ್ಲಿ ಇವಿಎಂನಲ್ಲಿ ಇನ್‍ವ್ಯಾಲಿಡ್(ಅನರ್ಹ) ಎಂಬ ದೋಷ ಕಂಡುಬಂದಿತು. ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 119ರಲ್ಲೂ ತಾಂತ್ರಿಕ ದೋಷ ಉಂಟಾಗಿ ಮತದಾನ ವಿಳಂಬವಾಯಿತು.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಎಲಗಾನಹಳ್ಳಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾರಾಮಾರಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ವೆಂಕಟಪುರದಲ್ಲಿ ತಾವು ಸೂಚಿಸಿದ್ದ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಯ ಮನೆ ಮೇಲೆ ದಾಳಿ ನಡೆಸಲಾಗಿದೆ.
ಪ್ರಮುಖ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಮನೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದರಲ್ಲದೆ ಮಹಿಳೆಯ ಮೇಲೂ ಹಲ್ಲೆ ನಡೆಸಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ರಾಜಕೀಯ ಪಕ್ಷವೊಂದರ ಏಜೆಂಟರೊಬ್ಬರು ಮತದಾನ ನಡೆದ ಬಳಿಕ ರಾಜರೋಷವಾಗಿ ಮತದಾರರಿಗೆ ಹಣ ಹಂಚುತ್ತಿದ್ದ ದೃಶ್ಯ ಕಂಡುಬಂದಿತು.
ದಾವಣಗೆರೆ ಜಿಲ್ಲೆ ಮಾಯಕೊಂಡ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದು ಆಕ್ರೋಶ ಗೊಂಡ ಗ್ರಾಮಸ್ಥರು ಮತದಾನವನ್ನೇ ಬಹಿಷ್ಕರಿಸಿದ್ದಾರೆ.
ನಕಲಿ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಯಾದಗಿರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು.

ರಾಯಚೂರಿನ ಲಿಂಗಸೂರಿನ ಕಡದರಗಡ್ಡಿ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಬೇಕೆಂಬ ಬೇಡಿಕೆಗೆ ಜನಪ್ರತಿನಿಧಿಗಳು ಸ್ಪಂದಿಸದ ಕಾರಣ ಮತದಾರರು ಮತದಾನ ಬಹಿಷ್ಕರಿಸಿದ್ದಾರೆ.
ಮತದಾನ ಮಾಡುವಂತೆ ಚುನಾವಣಾಧಿಕಾರಿಗಳು ಅಲ್ಲಿನ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ ಅವರಿಗೆ ರಕ್ತದೊತ್ತಡ ಉಂಟಾಗಿ ಮತಗಟ್ಟೆಯಿಂದಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಮನಗರದ ಹನುಮಂತನಗರ ಮತಗಟ್ಟೆ ಸಂಖ್ಯೆ 74ಎ ನಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಪ್ರಮುಖ ಪಕ್ಷವೊಂದರ ಕಾರ್ಯಕರ್ತರನ್ನು 50 ಸಾವಿರ ನಗದು ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಮತ ಚಲಾಯಿಸಲು ಬಂದಿದ್ದರು. ಆದರೆ ಇವಿಎಂ ಕೈಕೊಟ್ಟಿದ್ದರಿಂದ 20 ನಿಮಿಷ ಸರದಿಯಲ್ಲೇ ನಿಲ್ಲಬೇಕಾಯಿತು.
ಹೊಸಕೋಟೆಯಲ್ಲಿ ಮತ ಚಲಾಯಿಸಲು ಮತದಾರರು ಮತಗಟ್ಟೆಗೆ ಬಂದಿದ್ದರು. ಆದರೆ ಇವಿಎಂಗಳು ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಜನರು ಬೇಸತ್ತು ಹಿಂತಿರುಗಿರುವ ಘಟನೆಯೂ ನಡೆಯಿತು. ಬಳಿಕ ಚುನಾವಣಾ ಸಿಬ್ಬಂದಿ ಮನವೊಲಿಸುವಲ್ಲಿ ಪ್ರಯತ್ನಿಸಿದರಾದರೂ ಕೆಲವರು ಮತ ಚಲಾಯಿಸಿದರೆ, ಇನ್ನು ಕೆಲವರು ಮತದಾನ ಮಾಡದೇ ವಾಪಸ್ ಹೋದರು.

ಹಾಸನ ಜಿಲ್ಲೆ ಹೊಳೆ ನರಸೀಪುರದ ಪರಸನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಅವರ ಕಾರಿನ ಮೇಲೆ ಕೆಲ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಹೀಗೆ ಹಲವು ಅಹಿತಕರ ಘಟನೆಗಳ ನಡುವೆಯೂ ಮತದಾರರು ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು ವಿಶೇಷವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ