ಮಂಡ್ಯ, ಮೇ 12- ಮತಗಟ್ಟೆ ಸಮೀಪ ಪ್ರಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಲಘುಲಾಠಿ ಪ್ರಹಾರ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಕ್ಕರೆಹುಂಡಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕೊಕ್ಕರೆಹುಂಡಿ ಗ್ರಾಮದ ಮತಗಟ್ಟೆ ಬಳಿ ಪ್ರಚಾರ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಕ್ರಮವನ್ನು ಜೆಡಿಎಸ್ ಕಾರ್ಯಕರ್ತರು ಆಕ್ಷೇಪಿಸಿದ್ದರಿಂದ ಪರಸ್ಪರ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಸ್ಥಳೀಯ ಪೆÇಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮನೆ ಬಾಗಿಲಿಗೆ ಹಣ:
ಮತದಾರರನ್ನು ಆಕರ್ಷಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದ ಅಭ್ಯರ್ಥಿಗಳು ಲಕೋಟೆಯೊಂದರಲ್ಲಿ ಹಣ ಹಾಕಿ ಮತದಾರರ ಮನೆ ಮುಂದೆ ಇಟ್ಟು ಹೋಗಿರುವ ಘಟನೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಳೇನಹಳ್ಳಿಯಲ್ಲಿ ನಡೆದಿದೆ.
ಸುಮಾರು 2ಸಾವಿರ ಹಣವನ್ನು ಮಂಜುನಾಥಸ್ವಾಮಿ ಭಾವಚಿತ್ರವಿರುವ ಲಕೋಟೆಯಲ್ಲಿ ಇಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.
ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಮಾಡುತ್ತಿರುವ ತಂತ್ರಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯ ನಗರದ ಹೊಸಹಳ್ಳಿ ಶಾಲೆಯ ಮತಗಟ್ಟೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದು ವಿಶೇಷವಾಗಿತ್ತು.