ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮೃತಪಟ್ಟರೆ ಹತ್ತಿರದ ಸಂಬಂಧಿಗೆ 10 ಲಕ್ಷ ರೂ. ಪರಿಹಾರ: ಚುನಾವಣಾ ಆಯೋಗ ಶಿಫಾರಸು

 

ಬೆಂಗಳೂರು, ಮೇ 11- ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮೃತಪಟ್ಟರೆ ಹತ್ತಿರದ ಸಂಬಂಧಿಗೆ 10 ಲಕ್ಷ ರೂ. ಪರಿಹಾರ ಧನ ನೀಡುವಂತೆ ಭಾರತದ ಚುನಾವಣಾ ಆಯೋಗ ಶಿಫಾರಸು ಮಾಡಿದೆ.
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಹಾಗೂ ಸಿಬ್ಬಂದಿ ಗಾಯಗೊಂಡರೆ ಅಥವಾ ಮೃತಪಟ್ಟರೆ ನೀಡಬೇಕಾಗಿರುವ ಪರಿಹಾರವನ್ನು ಆಯೋಗ ನಿಗದಿಪಡಿಸಿದೆ.

ಯಾವುದೇ ಹಿಂಸಾತ್ಮಕ ಚಟುವಟಿಕೆ, ಉಗ್ರಗಾಮಿಗಳು, ಪ್ರಕೃತಿ ವಿಕೋಪ, ಬಾಂಬ್, ಶಸ್ತ್ರಾಸ್ತ್ರಗಳ ದಾಳಿ, ಸಮಾಜಘಾತುಕ ಶಕ್ತಿಗಳಿಂದ ಸಾವು ಸಂಭವಿಸಿದಲ್ಲಿ ಪರಿಹಾರದ ಮೊತ್ತವಾಗಿ 20 ಲಕ್ಷ ರೂ. ನೀಡಬೇಕಿದೆ. ದೃಷ್ಟಿ ಕಳೆದುಕೊಳ್ಳುವುದು ಸೇರಿದಂತೆ ಶಾಶ್ವತ ಶಾರೀರಿಕ ದೌರ್ಬಲ್ಯಗಳು ಉಂಟಾದ ಸಂದರ್ಭದಲ್ಲಿ ಕನಿಷ್ಟ 5 ಲಕ್ಷ ರೂ.ಗಳನ್ನು ಅನುಗ್ರಹ ಪೂರ್ವಕ ಪರಿಹಾರವಾಗಿ ಸಂದಾಯ ಮಾಡಬೇಕಾಗುತ್ತದೆ.
ರಾಜ್ಯ ಸರ್ಕಾರಿ ನೌಕರರಿಗೆ ಕೆಸಿಎಸ್‍ಆರ್ ನಿಯಮಗಳನ್ವಯ ಡಿಸಿಆರ್‍ಜಿ ನಿವೃತ್ತಿ ವೇತನ, ಕೆಜಿಐಡಿ ಸಾಮೂಹಿಕ ಜೀವವಿಮೆ ಸೇರಿದಂತೆ ಲಭ್ಯವಿರುವ ಇತರ ಎಲ್ಲ ಸವಲತ್ತುಗಳನ್ನು ನೀಡುತ್ತದೆ.

ತುರ್ತು ವೈದ್ಯಕೀಯ ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡಲು ವೈದ್ಯರ ತಂಡವನ್ನು ನಿಯೋಜಿಸಬೇಕು. ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಚುನಾವಣಾ ಸಿಬ್ಬಂದಿಗೆ ಮತದಾನದ ದಿನವಷ್ಟೆ ಅಲ್ಲದೆ ಚುನಾವಣಾ ಕಾರ್ಯಕ್ಕೆ ತೆರಳುವ ಮತ್ತು ಅಲ್ಲಿಂದ ಮರಳುವ ದಿನಗಳಂದು ರವಾನೆ ಕೇಂದ್ರಗಳಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಪೂರಕವಾಗಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸುವಂತೆ ಆಯೋಗ ನಿರ್ದೇಶಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ