ಮತದಾರರ ಪಟ್ಟಿ, ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‍ಗಳೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ

ಬೆಂಗಳೂರು, ಮೇ 11- ರಾಜ್ಯ ವಿಧಾನಸಭೆ ಚುನಾವಣೆಗೆ ನಾಳೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿ ಇಂದು ಮತದಾರರ ಪಟ್ಟಿ, ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‍ಗಳೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿದರು.

ಇದಕ್ಕೂ ಮುನ್ನ ನಿಯೋಜಿತ ಸಿಬ್ಬಂದಿ ಪೆÇೀಸ್ಟಲ್ ಬ್ಯಾಲೆಟ್ ಮೂಲಕ ತಮ್ಮ ಹಕ್ಕು ಚಲಾಯಿಸಿ ಮತಗಟ್ಟೆಗಳಿಗೆ ತೆರಳಿದರು.
ನಾಳೆ ಬೆಳಗ್ಗೆ 7 ರಿಂದ ಸಂಜೆ 6.30ರವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಲಿರುವುದರಿಂದ ನಿಯೋಜಿತ ಸಿಬ್ಬಂದಿ ಇಂದು ಸಂಜೆಯೇ ಮತಗಟ್ಟೆಗಳಿಗೆ ತೆರಳಿ ಅಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.

ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಸಮಾವೇಶಗೊಂಡ ಸಿಬ್ಬಂದಿ ಚುನಾವಣಾಧಿಕಾರಿಗಳಿಂದ ಪಡೆದ ಸಂಪೂರ್ಣ ಮಾಹಿತಿ ಹಾಗೂ ಮತಯಂತ್ರ ಮತ್ತಿತರ ಪರಿಕರಗಳೊಂದಿಗೆ ಬಸ್‍ಗಳ ಮೂಲಕ ಮತಗಟ್ಟೆಗೆ ತೆರಳಿ ನಾಳಿನ ಮತದಾನ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ಮಾಡಿಕೊಂಡರು.
ಇಂದು ಬೆಳಗ್ಗೆಯೇ ಪ್ರತಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಚುನಾವಣಾ ಅಧಿಕಾರಿಗಳು ಚುನಾವಣಾ ಸಿಬ್ಬಂದಿಗೆ ಮತಯಂತ್ರ ಹಾಗೂ ಮತದಾನಕ್ಕೆ ಬೇಕಾದ ಸಾಮಗ್ರಿಗಳನ್ನು ಹಂಚಿಕೆ ಮಾಡಿದರು.

ಮಹಿಳಾ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮಹಿಳಾ ಮತದಾರರು ಹೆಚ್ಚಾಗಿರುವ ಕಡೆ ಪ್ರತ್ಯೇಕ ಮಹಿಳಾ ಪಿಂಕ್ ಮತಗಟ್ಟೆಗಳನ್ನು ತೆರೆದಿದ್ದು, ಈ ಮತಗಟ್ಟೆಗೆ ತೆರಳುವ ಮಹಿಳಾ ಸಿಬ್ಬಂದಿ ಪಿಂಕ್ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸಲಿದ್ದಾರೆ.
ಮತಗಟ್ಟೆ ಸಿಬ್ಬಂದಿ ಮತಯಂತ್ರದೊಂದಿಗೆ ತೆರಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಮತಗಟ್ಟೆ ವ್ಯಾಪ್ತಿಯ ನೂರು ಮೀಟರ್ ಒಳಗೆ ಮತಯಾಚನೆ ನಿರ್ಬಂಧಿಸುವ ಪಟ್ಟೆ(ಗುರುತು)ಯನ್ನು ಎಲ್ಲಾ ಮತಗಟ್ಟೆಗಳಲ್ಲಿ ಇಂದೇ ಹಾಕಲಾಗಿತ್ತು.

ಈ ಹಿಂದೆ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಕ್ರಿಟಿಕಲ್ ಪೆÇೀಲಿಂಗ್ ಸ್ಟೇಷನ್ ಮತ್ತು ನಾರ್ಮಲ್ ಪೆÇೀಲಿಂಗ್ ಸ್ಟೇಷನ್ ಎಂದು ವಿಂಗಡಿಸಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ನಿಯೋಜನೆಗೊಂಡ ಭದ್ರತಾ ಸಿಬ್ಬಂದಿ ಇಂದೇ ಮತಗಟ್ಟೆಗೆ ತೆರಳಿ ಭದ್ರತೆಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡರು.

ರಾಜಧಾನಿ ಬೆಂಗಳೂರಿನಲ್ಲಿ 1595, ಬೆಳಗಾವಿ 891, ಮೈಸೂರು 632, ತುಮಕೂರು 528, ದಕ್ಷಿಣ ಕನ್ನಡ 483 ಸೇರಿದಂತೆ ರಾಜ್ಯದಲ್ಲಿ 12,002 ಕ್ರಿಟಿಕಲ್ ಪೆÇೀಲಿಂಗ್ ಸ್ಟೇಷನ್‍ಗಳೆಂದು ಗುರುತಿಸಲಾಗಿದ್ದು, ಇವುಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಮತಗಟ್ಟೆಯ 100 ಮೀಟರ್ ಸುತ್ತಳತೆಯಲ್ಲಿ ಯಾವುದೇ ಪ್ರಚಾರ ಮಾಡುವಂತಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ