ರಾಜ್ಯ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಸಕಲ ಸಿದ್ದತೆ:

ಮೈಸೂರು, ಮೇ 11- ರಾಜ್ಯ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮತದಾನದ ವೇಳೆ ಯಾವುದೇ ತೊಂದರೆಗಳಾಗದಂತೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2860 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 387 ಅತಿಸೂಕ್ಷ್ಮ, 805 ಸೂಕ್ಷ್ಮ ಹಾಗೂ 1181 ಸಾಮಾನ್ಯ ಮತಗಟ್ಟೆಗಳೆಂದು ಹೇಳಿದ್ದಾರೆ.
ಮತದಾನ ನಾಳೆ ಬೆಳಗ್ಗೆ 7ರಿಂದ ಸಂಜೆ 6.30ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ 12,21,925 ಪುರುಷರು, 12,10,413 ಮಂದಿ ಮಹಿಳೆಯರು ಸೇರಿ ಒಟ್ಟು 24,32,338 ಮತದಾರರಿದ್ದಾರೆ. ಮತಗಟ್ಟೆಗೆ ಸಿಬ್ಬಂದಿ ತೆರಳಲು ಮಿಸ್ಟರಿಂಗ್ ಕಾರ್ಯ ಇಂದು ಬೆಳಗ್ಗೆ ನಡೆಯಿತು.
ಒಂದು ಮತಗಟ್ಟೆಗೆ ಐದು ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 402 ಕೆಎಸ್‍ಆರ್‍ಟಿಸಿ ಬಸ್‍ಗಳು, 65 ಖಾಸಗಿ ಬಸ್‍ಗಳನ್ನು ಬಳಸಿಕೊಳ್ಳಲಾಗಿದೆ. ಭದ್ರತೆಗಾಗಿ 5000 ಪೆÇಲೀಸರನ್ನು ನಿಯೋಜಿಸಲಾಗಿದೆ ಎಂದರು.
ಪ್ರತಿಷ್ಠಿತ ಕಣವೆಂದೇ ಬಿಂಬಿತವಾಗಿರುವ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 335 ಮತಗಟ್ಟೆಗಳನ್ನು ತೆರೆಯಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ