ಮೈಸೂರು, ಮೇ 10-ನಗರದ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ನವರ ಅಬ್ಬರದ ಪ್ರಚಾರವಿದ್ದರೂ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜ ಅವರನ್ನು ವಿಜಯಿಯನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರುಣಾದಲ್ಲಿ ಬಸವರಾಜು ಅವರು ಗೆಲ್ಲಲೇಬೇಕು ಎಂಬ ಟಾರ್ಗೆಟ್ಅನ್ನು ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೊಟ್ಟಿದಾದರ ಎಂಬ ವರದಿಗಾರರ ಪ್ರಶ್ನೆಗೆ ಬಸವರಾಜು ಅವರನ್ನು ಗೆಲ್ಲಿಸಲೇಬೇಕು ಎಂಬುದು ನಾನು ಸೇರಿದಂತೆ ಕ್ಷೇತ್ರದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಗುರಿಯಾಗಿದೆ. ಹಾಗಾಗಿ ಟಾರ್ಗೆಟ್ ಎಂಬ ಪ್ರಶ್ನೆ ಇಲ್ಲ ಎಂದು ಉತ್ತರಿಸಿದರು.
ನಿಮಗೆ ಟಿಕೆಟ್ ಸಿಗದ ಕಾರಣ ನಿಮ್ಮ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆಯಲ್ಲ ಎಂಬ ಪ್ರಶ್ನೆಗೆ, ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಕೆಲ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲ ಗೊಂದಲ ಎಂಬುದಾಗಿ ಹೇಳಲಾಗಲ್ಲ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುವಂತೆ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.
ರಾಮದಾಸ್ ವಿರುದ್ಧ ವೀರಶೈವ ಮುಖಂಡರು ತಿರುಗಿಬಿದ್ದಿದ್ದಾರಲ್ಲ ಎಂದು ಕೇಳಿದುದಕ್ಕೆ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದಷ್ಟೆ ಉತ್ತರಿಸಿದರು.






