ಬಾಗಲಕೋಟೆ, ಮೇ 10- ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಡಿವೈಎಸ್ಪಿ ಬಾಳೇಗೌಡ ಸೇರಿದಂತೆ ಮೂವರು ಪೆÇಲೀಸರು ತಾಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸಿಐಡಿ ಘಟಕದ ಡಿವೈಎಸ್ಪಿ ಬಾಳೇಗೌಡ (55), ಇನ್ಸ್ಪೆಕ್ಟರ್ ಶಿವಸ್ವಾಮಿ (55), ಚಾಲಕ ವೇಣುಗೋಪಾಲ್ (25) ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೆÇಲೀಸರು.
ಬಾಳೇಗೌಡ ಮತ್ತು ಶಿವಸ್ವಾಮಿ ಅವರನ್ನು ಬಾಗಲಕೋಟೆಯಲ್ಲಿ ಚುನಾವಣಾ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ತಮ್ಮ ಜೀಪಿನಲ್ಲಿ ಬಾಗಲಕೋಟೆಗೆ ತೆರಳುತ್ತಿದ್ದಾಗ ತಿರೂರು-ಬಾಗಲಕೋಟೆ ಮಧ್ಯದಲ್ಲಿರುವ ಕೂಡಲ ಸಂಗಮ ಕ್ರಾಸ್ ಬಳಿ ಎದುರಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆಯಿತು.
ಅಪಘಾತದ ರಭಸಕ್ಕೆ ಜೀಪ್ ಮತ್ತು ಲಾರಿ ಒಂದಕ್ಕೊಂದು ಅಪ್ಪಚ್ಚಿಯಾಗಿದ್ದವು. ಸ್ಥಳೀಯರು ಮತ್ತು ಪೆÇಲೀಸರು ಹರಸಾಹಸಪಟ್ಟು ವಾಹನಗಳನ್ನು ಬೇರ್ಪಡಿಸಿದಾಗ ಜೀಪಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಗಲಕೋಟೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ವಂಶಿಕೃಷ್ಣ, ಡಿವೈಎಸ್ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪಾರ್ಥಿವ ಶರೀರಗಳನ್ನು ಅವರ ಕುಟುಂಬ ವರ್ಗದವರಿಗೆ ಹಸ್ತಾಂತರಿಸಲಾಗುವುದು ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಾಳೇಗೌಡರ ಹಿನ್ನೆಲೆ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೆಬ್ಬಳ್ಳಿ ಗ್ರಾಮದ ಬಾಳೇಗೌಡ ಅವರು 1998ರಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಪೆÇಲೀಸ್ ಸೇವೆ ಆರಂಭಿಸಿದ್ದರು.
ಕುಣಿಗಲ್ನಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ, ಅಲ್ಲೇ ಸರ್ಕಲ್ ಇನ್ಸ್ಪೆಕ್ಟರ್ ಆಗಿ, ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣೆಗೆ ಬಾಳೇಗೌಡರು ಬಂದ ನಂತರ ಅಲ್ಲಿನ ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಿದ್ದರು. ನಂತರ ಅವರು ಸಿಸಿಬಿ ಹಾಗೂ ತುಮಕೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಂದ ಉತ್ತಮ ಪೆÇಲೀಸ್ ಅಧಿಕಾರಿ ಎಂದು ಶಹಭಾಷ್ಗಿರಿ ಗಿಟ್ಟಿಸಿಕೊಂಡಿದ್ದರು.
ಬೆಂಗಳೂರಿನ ಸಿಸಿಬಿಯಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಿರಿಮೆ ಹೊಂದಿರುವ ಬಾಳೇಗೌಡ ಅವರು ತಮ್ಮ ಅವಧಿಯಲ್ಲಿ ನಗರದ ಹಲವಾರು ಕುಖ್ಯಾತ ರೌಡಿಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದರು.
ಗಂಭೀರ ಕೊಲೆ, ಅಪಹರಣ ಮತ್ತಿತರ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ನಿಸ್ಸೀಮ ಅಧಿಕಾರಿ ಎಂದೇ ಇಲಾಖೆಯಲ್ಲಿ ಗುರುತಿಸಿಕೊಂಡಿದ್ದರು.
ಭೂಗತ ಲೋಕದ ದೊರೆಯಾಗಿ ಮೆರೆಯಬೇಕೆಂಬ ಉದ್ದೇಶದಿಂದ ಬೆಂಗಳೂರು, ಕುಣಿಗಲ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರಲ್ಲಿ ನಡುಕ ಹುಟ್ಟಿಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಕುಣಿಗಲ್ ಗಿರಿಗೆ ಎಡೆಮುರಿ ಕಟ್ಟಿ ಕರೆತರುವಲ್ಲಿ ಬಾಳೇಗೌಡರು ಯಶಸ್ವಿಯಾಗಿದ್ದರು.
ಕೇವಲ ಒಂದು ತಿಂಗಳ ಹಿಂದೆಯಷ್ಟೆ ಡಿವೈಎಸ್ಪಿ ಹುದ್ದೆಗೆ ಬಡ್ತಿ ಪಡೆದ ಬಾಳೇಗೌಡರನ್ನು ಸಿಐಡಿ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಬಾಗಲಕೋಟೆಯಲ್ಲಿ ಚುನಾವಣಾ ರಕ್ಷಣಾ ಕಾರ್ಯಕ್ಕಾಗಿ ಅವರನ್ನು ನಿಯೋಜಿಸಲಾಗಿತ್ತು.
ಅಪಘಾತದಲ್ಲಿ ಮೃತಪಟ್ಟ ಇನ್ಸ್ಪೆಕ್ಟರ್ ಶಿವಸ್ವಾಮಿ ಅವರು ಮೂಲತಃ ಮೈಸೂರು ಜಿಲ್ಲೆಯವರು. ಜೀಪ್ ಚಾಲಕ ವೇಣುಗೋಪಾಲ್ ಹೋಂಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಗೌರವ ವಂದನೆ: ತುಮಕೂರಿನ ತಿಲಕ್ಪಾರ್ಕ್ ವೃತ್ತದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ದಕ್ಷತೆ ಮೆರೆದು ಜನಮನ್ನಣೆಗೆ ಪಾತ್ರರಾಗಿದ್ದ ಡಿವೈಎಸ್ಪಿ ಬಾಳೇಗೌಡ ಅವರ ಪಾರ್ಥಿವ ಶರೀರಕ್ಕೆ ಇಂದು ಜಿಲ್ಲಾ ಸಶಸ್ತ್ರ ಪೆÇಲೀಸ್ ಮೈದಾನದಲ್ಲಿ ಗೌರವವಂದನೆ ಸಲ್ಲಿಸಲಾಗುವುದು ಎಂದು ಎಸ್ಪಿ ಡಾ.ದಿವ್ಯ ಗೋಪಿನಾಥ್ ತಿಳಿಸಿದ್ದಾರೆ.