
ಹೈದರಾಬಾದ್:ಮೇ-10: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗುತ್ತೇನೆ ಎಂಬ ಕನಸು ಕಾಣುತ್ತಿದ್ದಾರೆ, ರಾಹುಲ್ ಕನಸಿಗೆ ಅಭಿನಂದನೆಗಳು. ಆದರೆ 2024 ರ ವರೆಗೆ ಆ ಹುದ್ದೆ ಖಾಲಿಯಿಲ್ಲ ಎಂದು ಬಿಜೆಪಿ ಹೇಳಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಲ್ಲಿ ತಾನು ಪ್ರಧಾನಿಯಾಗುವುದಕ್ಕೆ ಸಿದ್ಧ ಎಂದು ಇತ್ತೀಚೆಗೆ ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹೈದರಾಬಾದ್ ಬಿಜೆಪಿ ಮುಖಂಡ ಷಹನವಾಜ್ ಹುಸೇನ್, ರಾಹುಲ್ ಗಾಂಧಿ ಹಗಲು ಕನಸು ಕಾಣುತ್ತಿದ್ದಾರೆ, ಅವರ ಸುಂದರ ಕನಸುಗಳಿಗೆ ನಮ್ಮ ಅಭಿನಂದನೆಗಳು, ಆದರೆ 2024ರ ವರೆಗೆ ಪ್ರಧಾನಿ ಹುದ್ದೆ ಖಾಲಿಯಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲೂ ಕೂಡ ದೇಶದ ಜನತೆ ನರೇಂದ್ರ ಮೋದಿ ಅವರನ್ನೇ ಆಯ್ಕೆ ಮಾಡುತ್ತಾರೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ, ಕಾಂಗ್ರೆಸ್ ಮುಖಂಡರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಗಾಂಧಿ ಮನೆತನದ ವಂಶವಾಹಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಹುಸೇನ್, ರಾಹುಲ್ ಗಾಂಧಿ ಎಐಸಿಸಿ ಉಪಾಧ್ಯಕ್ಷರಾಗಿ ನೇಮಕವಾದಾಗ ಕಾಂಗ್ರೆಸ್ 13 ರಾಜ್ಯಗಳನ್ನು ಕಳೆದುಕೊಂಡಿತ್ತು, ಈಗ ಮತ್ತೆ ರಾಹುಲ್ ಪಕ್ಷದ ಅಧ್ಯಕ್ಷರಾಗಿದ್ದಾರೆ ಮತ್ತೆ 5 ರಾಜ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಟೀಕಿಸಿದ್ದಾರೆ.