ಬಿ.ಎಸ್‌.ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿ 5 ವರ್ಷ ಅಧಿಕಾರ ಪೂರೈಸಲಿದ್ದಾರೆ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಬೆಂಗಳೂರು:ಮೇ-10: ಬಿ.ಎಸ್‌.ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿ 5 ವರ್ಷ ಅಧಿಕಾರ ಪೂರೈಸಲಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ,ಜೆಡಿಎಸ್‌ ಜತೆ ಸರ್ಕಾರ ರಚಿಸುವ ಅನಿವಾರ್ಯತೆ ಬಿಜೆಪಿಗೆ ಬರುವುದಿಲ್ಲ. ಬಿ.ಎಸ್‌.ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿ 5 ವರ್ಷ ಅಧಿಕಾರ ಪೂರೈಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಕರ್ನಾಟಕದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುತ್ತೇವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ವಾತಾವರಣ ನಿರ್ಮಾಣವಾಗಿದೆ. ಬಾದಾಮಿ, ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಮುಖವಾಡ ಕಳಚಿದೆ. ವೋಟರ್ ಐಡಿ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬಂಧನವಾಗಿದೆ. ಈ ಪ್ರಕರಣವನ್ನು ಬಿಜೆಪಿ ಮೇಲೆ ಹಾಕಲು ಮುಂದಾಗಿದ್ದರು. ಎಸ್ ಡಿ ಪಿಐ, ಕಾಂಗ್ರೆಸ್ ನಡುವೆ ಒಪ್ಪಂದ ಆಗಿರೋದು ಜಗಜ್ಜಾಹೀರಾಗಿದೆ. ಜನತೆಯ ಮಧ್ಯೆ ಸಿದ್ದರಾಮಯ್ಯ ಮುಖವಾಡ ಈಗಾಗಲೆ ಬಯಲಾಗಿದೆ ಎಂದರು.

ಟಿಪ್ಪು ಜಯಂತಿ ಮಾಡುತ್ತಾರೆ. ಆದರೆ, ಕನ್ನಡದ ಶ್ರೇಷ್ಠ ವ್ಯಕ್ತಿಗಳ ಜಯಂತಿ ಮಾಡಲು ಕಾಂಗ್ರೆಸ್‌ಗೆ ನೆನಪಿಲ್ಲ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಇದೆ. ಸಿದ್ದರಾಮಯ್ಯ ಸ್ವತಂತ್ರ ಭಾರತದ ಅತ್ಯಂತ ವಿಫಲ ಸಿಎಂ. ರಾಜ್ಯದಲ್ಲಿ 4,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕನ ಮಗ ಗೂಂಡಾಗಿರಿ ಮಾಡಿದರೂ ಎಫ್‌ಐಆರ್‌ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಜನಾರ್ದನ ರೆಡ್ಡಿಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲವೆಂದ ಷಾ, ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕುರಿತು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ನಾಯಕರು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ