ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋತು ಪಕ್ಷವನ್ನು ಮೂಲೆಗುಂಪು ಮಾಡಿ ಮನೆಗೆ ಹೋಗಲಿದ್ದಾರೆ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಬಾದಾಮಿ,ಮೇ10- ಕಾಂಗ್ರೆಸ್ ಸೋಲಿಸುವುದರ ಜೊತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸೋತು ಪಕ್ಷವನ್ನು ಮೂಲೆಗುಂಪು ಮಾಡಿ ಮನೆಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸಿದ್ಧರಾಮಯ್ಯ ಎರಡೂ ಕ್ಷೇತ್ರಗಳಲ್ಲೂ ಸೋಲುವುದು ಕಟ್ಟಿಟ್ಟ ಬುತ್ತಿ. ರಾಜ್ಯದ ಜನತೆ ಅವರಿಗೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ. ನಾನೇ ಗೆದ್ದು ಎರಡನೇ ಬಾರಿಗೆ ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಬಾದಾಮಿ ಮತ್ತು ಚಾಮುಂಡೇಶ್ವರಿಯಲ್ಲಿ ಸೋತು ಸುಣ್ಣವಾಗಲಿದ್ದಾರೆ ಎಂದು ಹೇಳಿದರು.
ವೀರಶೈವ-ಲಿಂಗಾಯಿತ ಧರ್ಮವನ್ನು ಇಬ್ಭಾಗ ಮಾಡುವ ಮೂಲಕ ಸಿದ್ಧರಾಮಯ್ಯ ಈ ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ. ತನ್ನ ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಸಮುದಾಯ ಒಡೆದ ಅಪಕೀರ್ತಿ ಅವರಿಗೆ ಸಲ್ಲುತ್ತದೆ. ಯಾವುದೇ ಕಾರಣಕ್ಕೂ ಸಮುದಾಯ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಾದಾಮಿಯಲ್ಲಿರುವ ಶ್ರೀ ಹಾನಗಲ್ ಶಿವಯೋಗಿ ಸ್ವಾಮೀಜಿಗಳ ವಿರೋಧಕ್ಕೆ ಸಿದ್ಧರಾಮಯ್ಯ ಗುರಿಯಾಗಿದ್ದಾರೆ. ಧರ್ಮವನ್ನು ವಿಭಜಿಸಬಾರದೆಂದು ಶ್ರೀಗಳು ಪದೇ ಪದೇ ಹೇಳಿದರೂ ರಾಜಕೀಯ ಲಾಭಕ್ಕಾಗಿ ಒಡೆದರು. ಈ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪ್ರತಿಫಲ ಅನುಭವಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿವಿಧ ಕಡೆ ಪ್ರಚಾರ ನಡೆಸಿದ ಮೇಲೆ ಎಲ್ಲೆಡೆ ಬಿಜೆಪಿ ಪರ ಅಲೆ ನಿರ್ಮಾಣವಾಗಿದೆ. ನಾವು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದ್ದೇವೆ. ಯಾರೊಬ್ಬರ ಸಹಾಯ ಅಗತ್ಯವಿಲ್ಲ.ಬಿಜೆಪಿ ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದು ಕೇವಲ ಊಹಾಪೆÇೀಹ ಎಂದು ಸ್ಪಷ್ಟಪಡಿಸಿದರು.
15ರಂದು ಫಲಿತಾಂಶ ಪ್ರಕಟಗೊಂಡ ಬಳಿಕ ಬಿಜೆಪಿ ಏನೆಂಬುದು ಎಲ್ಲರಿಗೂ ಗೊತ್ತಾಗುತ್ತದೆ. 17ರಂದು ನಾನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಸೂರ್ಯ-ಚಂದ್ರ ಇರುವುದೆಷ್ಟು ಸತ್ಯವೋ ನಾನು ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ ಎಂದು ಆತ್ಮವಿಶ್ವಾಸದಿಂದ ನುಡಿದರು.
ಕಾಂಗ್ರೆಸ್‍ನ ದುರಾಡಳಿತದಿಂದ ಬೇಸತ್ತು ಜನರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಹಣ, ಹೆಂಡ ಹಚ್ಚಿ ಇಲ್ಲವೇ ಅಧಿಕಾರ ದುರುಪಯೋಗಪಡಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರಬಹುದೆಂಬ ಕನಸನ್ನು ಕೆಲವರು ಕಾಣುತ್ತಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರ ಹಿಡಿಯಲಿದೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿ ಅನುಮಾನ ಬೇಡ ಎಂದು ಪುನರುಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ