ಚಿಕ್ಕಮಗಳೂರು: ಮೇ-9: ಕಾಂಗ್ರೆಸ್ ಪಕ್ಷ ಈಗಲೇ ತನ್ನ ಸೋಲಿಗೆ ಕಾರಣ ನೀಡಲು ಅಣಿ ಮಾಡಿಕೊಳ್ಳುತ್ತಿದೆ. ತಮ್ಮ ಸೋಲಿಗೆ ಇವಿಎಂ ಕಾರಣ ಎಂದು ಹೇಳಲು ಆ ಪಕ್ಷದ ನಾಯಕರು ಸಿದ್ಧರಾಗುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಮಾವೇಶನ್ನುದ್ದೇಶಿಸಿ ಮಾತನಾಡಿದ ಮೋದಿ, 1978 ರಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಗೆಲುವು ಸಾಧಿಸಿದ್ದರು. ಗೆದ್ದ ಬಳಿಕ ಅವರೇನು ಮಾಡಿದರು. ನಿಮ್ಮೆಲ್ಲರ ಸಹಾಯದಿಂದ ಅಧಿಕಾರಕ್ಕೆ ಬಂದರು. ಉತ್ತರ ಭಾರತದಲ್ಲಿ ಧೂಳಿಪಟವಾಗಿದ್ದ ಕಾಂಗ್ರೆಸ್ ಗೆ ನೀವು ಆಸರೆ ಆಗಿದ್ದೀರಿ.. ಗೆದ್ದ ಬಳಿಕ ಅವರೆಲ್ಲ ಫಲಾಯನ ಮಾಡಿದರು ಎಂದರು.
ಇನ್ನು ಸೋನಿಯಾ ಗಾಂಧಿಗೆ 1999ರಲ್ಲಿ ಬಳ್ಳಾರಿ ಜನ ಪುನರ್ ಜನ್ಮ ನೀಡಿದರು. 3000 ಕೋಟಿ ಪ್ಯಾಕೇಜ್ ಘೋಷಿಸಿದರು. ಆದರೆ, ಆ ಹಣ ಬರಲೇ ಇಲ್ಲ. ಸೋನಿಯಾ ಆ ಕ್ಷೇತ್ರಕ್ಕೆ ಬಳಿಕ ರಾಜೀನಾಮೆ ನೀಡಿದರು. ಇದುವೇ ಕಾಂಗ್ರೆಸ್ ನ ಅಭಿವೃದ್ಧಿ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದರು.
ಅಮೇಥಿಯಿಂದ ಆರಿಸಿ ಬಂದಿರುವ ಹೆಸರುದಾರರು ಆ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು..? ಆ ಕ್ಷೇತ್ರ ನೋಡಿದರೆ ಅದರ ಅಭಿವೃದ್ಧಿ ಗೊತ್ತಾಗುತ್ತೆ. ಕಾಂಗ್ರೆಸ್ ಗೆ ವಂಶಾಡಳಿತವೇ ಮುಖ್ಯ.. ಪಿಎಂ ಖುರ್ಚಿಯದ್ದೇ ಅವರಿಗೆ ಧ್ಯಾನ.. 10 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಈಗ ಎಲ್ಲೆಡೆ ತಿರಸ್ಕೃತವಾಗಿದೆ. ಎಲ್ಲ ರಾಜ್ಯಗಳಲ್ಲಿ ವಿಫಲವಾಗಿದೆ. ಆದರೂ ಅಧಿಕಾರಕ್ಕೆ ಬರುವ ಆಸೆ ಬಿಟ್ಟಿಲ್ಲ. ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವದ ಅಂಶಗಳೇ ಇಲ್ಲ. ಇಂದಿರಾ ಕುಟುಂಬವೇ ಅವರಿಗೆ ಮುಖ್ಯ.. ಇದು ಕಾಂಗ್ರೆಸ್ನ ರಕ್ತಗತ ಅಂಶ ಎಂದು ಮೋದಿ ಚಾಟಿಬೀಸಿದ್ದಾರೆ.
ಎಲ್ಲೆಡೆ ಕಾಂಗ್ರೆಸ್ ಸೋಲನುಭವಿಸುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗ್ತಿಲ್ಲ. ಅದಕ್ಕಾಗೇ ಕಾಂಗ್ರೆಸ್ ಜೋರಾಗಿ ಇವಿಎಂ ಸರಿಯಿಲ್ಲ ಎಂದು ಬೊಬ್ಬೆ ಹಾಕುತ್ತಿದೆ. ವ್ಯವಸ್ಥಿತ ಚುನಾವಣೆ ಆಯೋಗದ ಮೇಲೆ ದೋಷಾರೋಪಣೆ ಮಾಡುತ್ತಿದೆ. ಇದು ದೇಶಕ್ಕೆ ಮಾಡಿದ ಅಪಮಾನ. ವಿಶ್ವದೆಲ್ಲೆಡೆ ಉತ್ತಮ ಕೆಲಸ ಮಾಡುತ್ತಿರುವ ಆಯೋಗದ ಮೇಲೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಅಷ್ಟೇ ಅಲ್ಲ ಸಿಎಜಿಯನ್ನೇ ಅಪಮಾನ ಮಾಡುತ್ತಿದೆ. ಕಾಂಗ್ರೆಸ್ ನೀತಿ ಏನು ಎಂದರೆ, ಕಾಂಗ್ರೆಸ್ ರೈಟ್, ಸಿಎಜಿ ರಾಂಗ್ .. ಹೇಗಿದೆ ಕಾಂಗ್ರೆಸ್ನ ಸುಳ್ಳಿನ ಕಂತೆ ಎಂದು ಪ್ರಧಾನಿ ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪ್ರಕಾರ ಎಲ್ಲವೂ ಸರಿಯಿಲ್ಲ. ಸಿಎಜಿ ಅಷ್ಟೇ ಅಲ್ಲ, ಸಿಬಿಐ, ಐಎನ್ಎ ಅಷ್ಟೇ ಏಕೆ ಸೇನೆಯ ಕಾರ್ಯ ವೈಖರಿಯೂ ಸರಿಯಿಲ್ಲ. ಆಡಳಿತ ಇಲ್ಲದೇ ವಿಲವಿಲ ಒದ್ದಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಕಂಡಿದ್ದೆಲ್ಲವೂ ಸರಿಯಿಲ್ಲ. ಅದಕ್ಕಾಗೇ ಅವರೆಲ್ಲ ಕಾಂಗ್ರೆಸ್ನ ಪ್ರತಿಯೊಂದು ನಡೆಯನ್ನು ಟೀಕಿಸುತ್ತಾರೆ.
ಇಲ್ಲಿನ ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಜಾತಿ ವಾದ ನಡೆಯಲ್ಲ, ಧರ್ಮ ಒಡೆಯಲು ಬಿಡುವುದಿಲ್ಲ. 12ನೇ ತಾರಿಖು ಮತದಾನ ಮಾಡುವ ಮೂಲಕ ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ. ಚುನಾವಣೆ ಲೋಕತಂತ್ರದ ಉತ್ಸವ ಇದ್ದಹಾಗೆ. ಇದು ಪವಿತ್ರ ಕೆಲಸವಾಗಿದ್ದು, ಮತದಾನ ಮಾಡಿ, ಸರ್ಕಾರಕ್ಕೆ ಪಾಠ ಕಲಿಸ್ತಾರೆ. ಪ್ರತಿಯೊಬ್ಬನು ಮತಗಟ್ಟೆಗೆ ಹೋಗಿ ಮತ ಚಲಾಯಿಸ್ತಾರೆ.
ಕಾಂಗ್ರೆಸ್ ಪಾರ್ಟಿ ಚುನಾವಣೆ ಬಳಿಕ ನೀರಿನಿಂದ ಹೊರ ತೆಗೆದ ಮೀನಿನಂತೆ ಚಟಪಟಿಸುತ್ತದೆ ಎಂದು ಪ್ರಧಾನಿ ಮೋದಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು. ನಿನ್ನೆ ರಾಜರಾಜೇಶ್ವರಿ ನಗರದಲ್ಲಿ ನಕಲಿ ಚುನಾವಣಾ ಐಡಿ ಕಾರ್ಡ್ ಸಿಕ್ಕಿವೆ. ಅದಕ್ಕೆ ಸಂಬಂಧಿಸಿದ ಪ್ರಿಂಟಿಂಗ್ ಮಷಿನ್, ಪ್ರಿಂಟರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವ್ಯವಸ್ಥಿತವಾಗಿ ನಕಲಿ ಮತದಾನ ಮಾಡಿ ಗೆಲ್ಲಲು ಕಾಂಗ್ರೆಸ್ ಯತ್ನಿಸಿದೆ. ನಾಲ್ಕು ಲಕ್ಷ ಮತದಾರರು ಇರುವ ಕ್ಷೇತ್ರದಲ್ಲಿ ಒಂದು ಲಕ್ಷ ನಕಲಿ ಮತದಾರರನ್ನು ಸೇರಿಸುವ ಯತ್ನವನ್ನು ಕಾಂಗ್ರೆಸ್ ಮಾಡಿದೆ. ಇಂತಹವರಿಗೆ ನೀವೇ ಪಾಠ ಕಲಿಸಬೇಕಿದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.