ಶತಮಾನ ಪೂರೈಸಿದ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು – ಡಾ. ರೇಣುಕಾ ಸ್ವಾಮಿ
ಬೀದರ್. ಮೇ. ೦೮ ಕನ್ನಡ ಸಾಹಿತ್ಯದಲ್ಲಿ ಶಾಸನ, ಪ್ರಾಚೀನ, ಶರಣ, ದಾಸ, ಪಂಪಯುಗದ ಸಾಹಿತ್ಯ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ಮತ್ತು ಜನಪದ ಸಾಹಿತ್ಯದ ಮುಂತಾದ ಪ್ರಕಾರಗಳ ತವರು ಮನೆಯೇ ಕನ್ನಡ ಸಾಹಿತ್ಯ. ಕನ್ನಡ ಸಾಹಿತ್ಯವು ಅತ್ಯಂತ ವಿಶಾಲವಾಗಿದ್ದು, ಪಂಪಭಾರತ, ಆದಿ ಪುರಾಣ, ಶಾಂತಿಪುರಾಣಗಳು ನಮ್ಮ ಹಳೆಗನ್ನಡ ಸಾಹಿತ್ಯದ ಮೇರು ಕೃತಿಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ಅಂದರೆ ಅದು ವಚನ ಸಾಹಿತ್ಯ. ವಚನ ಸಾಹಿತ್ಯ ಪ್ರಪಂಚದ ಯಾವುದೇ ಸಾಹಿತ್ಯ ಪ್ರಕಾರಗಳಲ್ಲಿ ಇಲ್ಲ ಎಂದು ಸಾಹಿತಿ ಡಾ.ರೇಣುಕಾ ಎಂ. ಸ್ವಾಮಿ ಪ್ರತಿಪಾದನೆ ಮಾಡಿದರು.
ಅವರು ಬೀದರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಗುಂಪಾ ರಸ್ತೆಯ ಆದಿತ್ಯ ಕೋಚಿಂಗ್ ಸೆಂಟರ್ನಲ್ಲಿ ಹಮ್ಮಿಕೊಂಡಿದ್ದ 103 ಕಸಾಪ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡುತ್ತಿದ್ದರು. ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಕನ್ನಡ ಸಾಹಿತ್ಯ ಪರಿಷತ್ತು ಬೆಳದು ಬಂದ ರೀತಿ ಅನನ್ಯ. ಶತಮಾನ ಪೂರೈಸಿದ ಹೆಮ್ಮಯು ಸಹ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದು ಅವರು ಹೇಳಿದರು. ಕನ್ನಡ ಸಾಹಿತ್ಯದ ಪರಂಪರೆಯು ಕ್ರಿ.ಶ.450ನೇ ಶತಮಾನದ ಹಲ್ಮಡಿ ಶಾಸನದಿಂದ ಆರಂಭಗೊಂಡು ಪೂರ್ವದ ಹಳೆಗನ್ನಡದ ವಡ್ಡಾರಾಧನೆ, ಕವಿರಾಜಮಾರ್ಗದಂತಹ ಮುಂತಾದ ಕೃತಿಗಳು ನಮ್ಮ ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿವೆ ಎಂದರು.
ಉದ್ಘಾಟಕರಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಸುಕಾಲೆಯವರು ಮಾತನಾಡುತ್ತ, ಕನ್ನಡ ವ್ಯಾಕರಣ, ಭಾಷಾ ಚರಿತ್ರೆ, ನಿಘಂಟು ಇವುಗಳ ರಚನೆ ಮತ್ತು ಕನ್ನಡ ಶಾಸ್ತ್ರಗ್ರಂಥಗಳ ಪಾರಿಭಾಷಿಕ ಶಬ್ಧಕೋಶಗಳ ಪ್ರಕಟಣೆ, ಉತ್ಕøಷ್ಟ ಪ್ರಾಚೀನ ಗ್ರಂಥಗಳ ಪ್ರಕಟಣೆ ಮುಂತಾದ ಸಾಹಿತ್ಯ ಪ್ರಕಾರಗಳ ಸಂರಕ್ಷಣೆ ಮತ್ತು ಪ್ರಕಟಣೆಯ ಉದ್ದೇಶ ಇಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಲಾಯಿತು ಎಂದು ಹೇಳಿದರು. ಕೇವಲ ಸಾಹಿತ್ಯ ಪ್ರಕಟಣೆ ಅಷ್ಟೇ ಅಲ್ಲದೆ ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಲೋಕದ ಮಹನೀಯರನ್ನು ಗೌರವಿಸುವ ಪರಿಪಾಠವನ್ನು ಪರಿಷತ್ತು ಬೆಳೆಸಿಕೊಂಡು ಬಂದಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿಯವರು ಮಾತನಾಡುತ್ತ, ಪರಿಷತ್ತು ಕನ್ನಡ ಸಾಹಿತ್ಯ ಕುರಿತಂತೆ ತನ್ನ ನಿರಂತರ ಕೆಲಸಗಳೊಂದಿಗೆ ಸಮಾಜಮುಖಿಯಾಗಿಯೂ ಕೆಲಸ ಮಾಡುತ್ತಿದೆ, ಪ್ರಸ್ತುತ ವಿಧಾನಸಭಾ ಚುನಾವಣೆಯ ಪ್ರಯುಕ್ತ ಮತದಾನ ಜಾಗೃತಿಗಾಗಿ ಬೀದರ ಜಿಲ್ಲೆಯಾದ್ಯಂತ 150 ಗ್ರಾಮಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಸಂವಿಧಾನದತ್ತ ಕರ್ತವ್ಯದಿಂದ ವಿಮುಖರಾಗುವ ಜನರನ್ನು ಮತದಾನದಂಥ ಪವಿತ್ರ ಕಾರ್ಯಕ್ಕೆ ಪ್ರೇರೇಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಎಂ.ಎಸ್. ಮನೋಹರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಮುಂದಿನ ದಿನಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ ಕುರಿತ ಉಪನ್ಯಾಸ ಮಾಲಿಕೆಯನ್ನು ಏರ್ಪಡಿಸಲಾಗುವುದು ಮತ್ತು ಈ ಸಂದರ್ಭದಲ್ಲಿ ಅಂತರ್ಜಾತಿಯ ವಿವಾಹ ಮಾಡಿಕೊಂಡವರನ್ನು ಸನ್ಮಾನಿಸಲಾಗುವುದೆಂದು ಹೇಳಿದರು. ಪರಿಷತ್ತಿನ ಗಡಿ ಪ್ರತಿನಿಧಿ ಶಿವಕುಮಾರ ಕಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಆರಂಭದಲ್ಲಿ ವೀರಶೆಟ್ಟಿ ಚೆನ್ನಶೆಟ್ಟಿ ಸ್ವಾಗತಿಸಿದರು. ಶರಣಬಸಪ್ಪ ಕಾರಾಮುಂಗೆ ವಂದಿಸಿದರು. ಕಲ್ಯಾಣರಾವ ಚಳಕಾಪುರೆ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ವೀರಕನ್ನಡಿಗರ ಸಂಸ್ಥೆ, ಕರ್ನಾಟಕ ಇವರು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಮತ್ತು ತಾಲೂಕು ಕ.ಸಾ.ಪ. ಅಧ್ಯಕ್ಷ ಎಂ.ಎಸ್.ಮನೋಹರ ಅವರಿ ‘ಕನ್ನಡ ಸೇವಾರತ್ನ’ ಎನ್ನುವ ಪ್ರಶಸ್ತಿ ಪ್ರದಾನ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಬಸವರಾಜ ಬಲ್ಲೂರು, ಐ.ಟಿ.ಐ.ಪ್ರಾಚಾರ್ಯ ಶಿವಶಂಕರ ಟೋಕರೆ, ರಮೇಶ ಬಿರಾದಾರ, ಶ್ರೀಮತಿ ಸುನೀತಾ ಬಿರಾದಾರ, ಸುನೀತಾ ಮಾಳಗೆ, ಸುಬ್ಬಣ್ಣ ಕರಕನಳ್ಳಿ, ಸಿದ್ದಲಿಂಗಯ್ಯ ಭಂಕಲಗಿ, ಆನಂದ ಪಾಟೀಲ, ಪ್ರೊ.ಜಗನ್ನಾಧ ಕಮಲಾಪುರೆ, ರಮೇಶ ನೇಳಗೆ, ವೀರುಪಾಕ್ಷ ದೇವರು, ಸಿದ್ರಾಮಪ್ಪ ಚಿಕನಾಗಾವೆ, ಶಂಕ್ರೆಪ್ಪ ಬುದೆರಾ, ಶಶಿಕಲಾ ಚಳಾಪುರೆ, ಆದಿತ್ಯ ಕೋಚಿಂಗ್ ಸೆಂಟರನ ಸಿಬ್ಬಂದಿಗಳು ಮತ್ತು ಮಕ್ಕಳು ಭಾಗವಹಿಸಿದ್ದರು.