ಹಣ ಹಂಚುವುದಿಲ್ಲ, ಕ್ಲೀನ್ ಪಾಲಿಟಿಕ್ಸ್ ನಮ್ಮ ಗುರಿ – ಡಾ.ನೌಹೀರಾ ಶೇಕ್

ಬೆಂಗಳೂರು : ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಲಾಭ ಇಲ್ಲವೇ ನಷ್ಟ ಉಂಟು ಮಾಡಲು ನಾವು ರಾಜಕೀಯ ಪಕ್ಷ ಸ್ಥಾಪಿಸಿಲ್ಲ ಎಂದು ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಿಗೆ ಲಾಭ ತಂದು ಕೊಡುವುದು, ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು, ಉತ್ತಮ ಆಡಳಿತ ನೀಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇವೆ. ಸೋಲು-ಗೆಲುವು ನಮ್ಮ ಗುರಿ ಉದ್ದೇಶಗಳನ್ನು ಬದಲಿಸುವುದಿಲ್ಲ ಎಂದರು.

ಡಾ.ನೌಹೀರಾ ಶೇಕ್ ಹೇಳಿದ್ದಿಷ್ಟು.
ಒಬ್ಬ ಉದ್ಯಮಿಯಾಗಿ ಏಕೆ ರಾಜಕೀಯಕ್ಕೆ ಬಂದಿದ್ದಾರೆ ? ಎಂಬ ಪ್ರಶ್ನೆ ಮೇಲಿಂದ ಮೇಲೆ ಕೇಳಿಬರುತ್ತಿದೆ. 25 ವರ್ಷ ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿದ್ದಿದ್ದು, ಸ್ವತಃ ಮಹಿಳೆಯಾಗಿ ಬಹಳ ಹತ್ತಿರದಿಂದ ಮಹಿಳೆಯರ ಕಷ್ಟ-ನಷ್ಟಗಳನ್ನು ನೋಡಿದ್ದೇನೆ. ಬಾಲ್ಯದಿಂದಲೇ ಹೆಣ್ಣು ಮಕ್ಕಳು ದುರ್ಬಲರು ಎಂಬ ಭಾವನೆ ಕೌಟಂಬಿಕ ಪರಿಸರದಿಂದಲೇ ಮೂಡಿಸಲಾಗುತ್ತಿದೆ. ಆದರೆ, ವಾಸ್ತವಿಕವಾಗಿ ಹೆಣ್ಣು ಅಬಲೆ ಅಲ್ಲ. ಸಬಲೆ.

ಎಂಇಪಿ ಪಕ್ಷದ ಸ್ಥಾಪನೆಯ ಹಿಂದೆ ಯಾವ ದೊಡ್ಡ ನಾಯಕನ ಪಾತ್ರವೂ ಇಲ್ಲ. ನಮಗೆ ಯಾರಿಂದಲೂ ಹಣದ ನೆರವು ಹರಿದು ಬರುತ್ತಿಲ್ಲ. ಜನರ ವಂತಿಗೆ ಹಾಗೂ ತಮ್ಮ ಕೈಯಿಂದ ಹಣ ವ್ಯಯ ಮಾಡುತ್ತಿದ್ದೇನೆ. ಉತ್ತಮ ಹಿನ್ನೆಲೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜಕೀಯಕ್ಕೆ ಕರೆ ತರುವುದೇ ನಮ್ಮ ಮುಖ್ಯ ಉದ್ದೇಶ. ಪಕ್ಷದ ಅಭ್ಯರ್ಥಿಗಳೂ ಕೂಡ ಚುನಾವಣಾ ಆಯೋಗದ ಚೌಕಟ್ಟಿನಲ್ಲಿ ತಮ್ಮ ಖರ್ಚುವೆಚ್ಚಗಳನ್ನು ತಾವೇ ಭರಿಸುತ್ತಿದ್ದಾರೆ. ಯಾರಿಗೂ ನಾವು ಹಣ ಹಂಚುವುದಿಲ್ಲ. ಮತದಾರರಿಗೆ ಆಮಿಷವೊಡ್ಡಿ ಓಟು ಕೇಳುವುದು ನಮ್ಮ ನೀತಿಯಲ್ಲ.

 

ವ್ಯವಸ್ಥೆಯಲ್ಲಿ ಬದಲಾವಣೆ ಬರಬೇಕು. ಕಾನೂನುಗಳು ಬದಲಾಗಬೇಕು. ಉತ್ತಮ ಆಡಳಿತದ ಉದ್ದೇಶವನ್ನಿಟ್ಟುಕೊಂಡು ಅಧಿಕಾರ ಹಿಡಿಯುವುದೇ ನಮ್ಮ ಗುರಿ. ಇದಕ್ಕೆ ಪೂರ್ವಭಾವಿ ತಯಾರಿ ಮಾಡಿಕೊಂಡೇ ಬಂದಿದ್ದೇವೆ. ಕರ್ನಾಟಕ ವಿಧಾನಸಭೆ ಚುನಾವಣೆ ನಂತರ ನಾವು ಲೋಕಸಭೆ ಹಾಗೂ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಪಕ್ಷ ಸ್ಪರ್ಧಿಸಲಿದೆ.
ಮಹಿಳೆಯರಿಗೆ ಶೇ.80 ಸ್ಥಾನ

ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಎಂಇಪಿ 52 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಮುಂದೆ ಬಂದಲ್ಲಿ ನೂರಕ್ಕೂ ಅಧಿಕ ಸ್ಥಾನಗಳನ್ನು ಮಹಿಳೆಯರಿಗೆ ನೀಡಲು ಸಿದ್ದ.
ಆದರೆ, ಕಳೆದ ನಾಲ್ಕು ತಿಂಗಳ ರಾಜಕೀಯ ಅನುಭವದಲ್ಲಿ ಕಲಿತ ಪಾಠ ಎಂದರೆ ರಾಜಕೀಯ ರಂಗಕ್ಕೆ ಮಹಿಳೆಯರೂ ಬಾರದಂತೆ ತಡೆ ಹಿಡಿಯುವ ಪ್ರಯತ್ನಗಳು ಕಣ್ಣಿಗೆ ಗೋಚರಿಸುತ್ತಿವೆ. ಇದರಿಂದ ನಾನು ವಿಚಲಿತಳಾಗುವುದಿಲ್ಲ. ರಾಜ್ಯ ವಿಧಾನಸಭೆ ಚುನಾವಣೆ ನಂತರ ಚಿತ್ರಣ ಬದಲಾಗಿ, ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರುವ ವಿಶ್ವಾಸವಿದೆ.

ಹಣ ಹಂಚುವುದಿಲ್ಲ
ಕೊಪ್ಪರಿಗೆ ಗಟ್ಟಲೇ ಹಣ ಮಾಡಿದವರು ಮಾತ್ರ ಚುನಾವಣೆ ಎದುರಿಸಲು ಸಾಧ್ಯ ಎಂಬ ಆಲೋಚನಾ ಕ್ರಮವೇ ತಪ್ಪು. ನಾವು ಭ್ರಷ್ಟಾಚಾರ ಮಾಡಲ್ಲ. ಮತದಾರರನ್ನು ಭ್ರಷ್ಟರನ್ನಾಗಿ ಮಾಡುವುದಿಲ್ಲ. ಒಂದು ವ್ಯವಸ್ಥೆಯನ್ನು ಉತ್ತಮಪಡಿಸಲು ಸಂಕಲ್ಪ ತೊಟ್ಟಿರುವ ನಾವು, ಚುನಾವಣಾ ಹಂತದಲ್ಲೇ ಮತದಾರರಿಗೆ ಇಲ್ಲಸಲ್ಲದ ಆಮಿಷವೊಡ್ಡಿ ವ್ಯವಸ್ಥೆಯನ್ನು ಇನ್ನಷ್ಟು ಕುಲಗೆಡಿಸಲು ನಾವು ತಯಾರಿಲ್ಲ.

ಮತದಾರರ ಮತದಲ್ಲೇ ಅವರ ಮತ್ತು ಅವರ ಕುಟುಂಬದ ಭವಿಷ್ಯ ಅಡಗಿದೆ. ಇದನ್ನೇ ನಾವು ಜನರಿಗೆ ಮನವರಿಕೆ ಮಾಡಿಕೊಟ್ಟು ಉತ್ತಮರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ಜನ ಸ್ಪಂದಿಸುವ ವಿಶ್ವಾಸವಿದೆ.
ಗುತ್ತಿಗೆ ಕೊಟ್ಟಿಲ್ಲ

ಪ್ರಜಾಪ್ರಭುತ್ವದಲ್ಲಿ ಮತದಾರರು ತಮಗಿಷ್ಟ ಬಂದವರಿಗೆ ಮತಕೊಡುವ ಹಕ್ಕಿದೆ. ಸಾಯುವ ತನಕ ತನ್ನ ಮತ ಇಂತಹದ್ದೇ ಪಕ್ಷಕ್ಕೆ ಎಂಬ ನಿಯಮವಿಲ್ಲ. ಆದರೆ, ಇದನ್ನು ಅರ್ಥಮಾಡಿಕೊಳ್ಳದ ಎದುರಾಳಿ ಪಕ್ಷಗಳು ತಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆದರಿಸುವ, ಬೆದರಿಸುವ ಪ್ರಯತ್ನವೂ ನಡೆದಿದೆ. ಜತೆಗೆ, ಕೆಲವರನ್ನು ಪಕ್ಷದ ವಿರುದ್ಧವೇ ಎತ್ತಿಕಟ್ಟುವ ಪ್ರಯತ್ನವೂ ನಡೆದಿದೆ. ಇದಕ್ಕೆಲ್ಲಾ ತಮ್ಮ ಪಕ್ಷ ಜಗ್ಗುವುದಿಲ್ಲ . ಕ್ಲೀನ್ ಪಾಲಿಟಿಕ್ಸ್ ನಮ್ಮ ಪಕ್ಷದ ಮುಖ್ಯ ಧ್ಯೇಯಗಳಲ್ಲೊಂದು.

ರೈತರ ಸಾಲ ಮನ್ನಾ
ಎಂಇಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೊದಲ ದಿನವೇ ರೈತರ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡಲಾಗುವುದು. ರೈತರ ಬದುಕು ಹಸನಾಗಲು ವೈಜ್ಞಾನಿಕ ಕೃಷಿ ಪದ್ಧತಿ ಬಗ್ಗೆ ರೈತರಿಗೆ ತರಬೇತುಗೊಳಿಸಲಾಗುವುದು. ಈ ಮೂಲಕ ರೈತರ ಸ್ವಾವಲಂಬಿ ಬದುಕಿಗೆ ನಾಂದಿ ಹಾಡಲಾಗುವುದು.
ಎಂಇಪಿ ಪಕ್ಷ ವಿಧಾನಸಭೆಯಲ್ಲಿ ರೈತರ ಧ್ವನಿ ಮೊಳಗಬೇಕು ಎಂಬ ಕಾರಣಕ್ಕೆ 7 ಸ್ಥಾನಗಳನ್ನು ರೈತ ಬಾಂಧವರಿಗೆ ನೀಡಿದೆ. ನಮ್ಮ ಅಭ್ಯರ್ಥಿಗಳ ಪಟ್ಟಿ ನೋಡಿದರೆ, ನೈಜ ಅರ್ಥದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದು ಸ್ಪಷ್ಟವಾಗುತ್ತದೆ.

ತಲಾಖ್ ವಿಷಯ
ತಲಾಖ್ ಎಂಬುದು ಧಾರ್ಮಿಕ ವಿಚಾರ. ನಿಂತಲ್ಲಿ , ಕೂತಲ್ಲಿ , ಹೆಂಡತಿ ನಿದ್ರಿಸುತ್ತಿರುವಾಗ, ಫೋನ್ ನಲ್ಲಿ, ವಾಟ್ಸಪ್ ನಲ್ಲಿ ತಲಾಖ್ ಮೂಲಕ ವಿಚ್ಚೇಧನ ನೀಡುವುದಕ್ಕೆ ಇಸ್ಲಾಂನಲ್ಲಿ ಅವಕಾಶ ಇಲ್ಲ. ಕುರ್ ಆನ್ ನಲ್ಲಿರುವುದನ್ನೇ ಸುಪ್ರೀಂಕೋರ್ಟ್ ಹೇಳಿದೆ.

ಆದರೆ, ಮೂರು ಬಾರಿ ತಲಾಖ್ ಹೇಳಿದ ಕಾರಣಕ್ಕೆ ಮೂರು ವರ್ಷ ಶಿಕ್ಷೆ ನೀಡುವ ವಿಧೇಯಕ ಜಾರಿಗೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಇದನ್ನು ಕಟುವಾಗಿ ವಿರೋಧಿಸುತ್ತೇನೆ. ಇದರಿಂದ ಗಂಡ-ಹೆಂಡತಿ ಮತ್ತೆ ಒಂದಾಗುವ ಸಾಧ್ಯಾಸಾಧ್ಯತೆಗಳೇ ತಪ್ಪಿದಂತಾಗುತ್ತದೆ. ಜತೆಗೆ, ತಲಾಖೆ ಹೇಳಿದವನ ಕುಟುಂಬ ಬೀದಿಪಾಲಾಗುವ ಸಾಧ್ಯತೆ ಇರುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ