ಬೆಂಗಳೂರು, ಮೇ 8-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಕೊಲೆ ಆರೋಪಿಯಾಗಿದ್ದು, ಅವರೊಬ್ಬ ಮೂಲಭೂತವಾದಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕುರಿತು ಅಮಿತ್ ಷಾ ಮಾಡಿರುವ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.
ನ್ಯಾಯಾಧೀಶ ಲೊಯಾ ಕೊಲೆ ಪ್ರಕರಣದಲ್ಲಿ ಅಮಿತ್ ಷಾ ಅವರನ್ನು ಆರೋಪಿ ಎಂದು ಉಲ್ಲೇಖಿಸಿದೆ. ಅವರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಇಂಥ ಹಿನ್ನೆಲೆಯುಳ್ಳ ಅಮಿತ್ಷಾ ಅವರಿಗೆ ಮತ್ತೊಬ್ಬರ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಬಿಜೆಪಿ ಪ್ರಾಮಾಣಿಕತೆ, ಶಿಸ್ತಿನ ಬಗ್ಗೆ ಪಾಠ ಮಾಡುತ್ತದೆ. ಅವರ ರಾಷ್ಟ್ರೀಯ ಅಧ್ಯಕ್ಷರೇ ಕೊಲೆ ಆರೋಪಿ. ಅಮಿತ್ ಷಾ ಓರ್ವ ಮೂಲಭೂತವಾದಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಚುನಾವಣೆ ವೇಳೆ ಪ್ರಮುಖ ಮೂರು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಭ್ರಷ್ಟಾಚಾರ ವಿರುದ್ಧ ಮಾತನಾಡುವ ಮೋದಿ, ಭ್ರಷ್ಟಾಚಾರದ ಆರೋಪದಡಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ದೇಕೆ? ರಾಜ್ಯದ ಗಣಿ ಸಂಪತ್ತಿನಲ್ಲಿ 35 ಸಾವಿರ ಕೋಟಿ ರೂ. ಮೌಲ್ಯದ ಅದಿರು ಕದ್ದ ರೆಡ್ಡಿ ಸಹೋದರರ ಏರ್ ಟಿಕೆಟ್ನಲ್ಲಿ ಅವರು ಓಡಾಡುವುದೇಕೆ? ರಫಾಯಿಲ್ ಯುದ್ಧ ವಿಮಾನದ ಜೋಡಣೆ ಗುತ್ತಿಗೆಯು ಬೆಂಗಳೂರಿನ ಎಚ್ಎಎಲ್ಗೆ ಕೊಟ್ಟಿದ್ದರೆ ಇಲ್ಲಿನ ಸಾವಿರಾರು ಮಂದಿ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಅದನ್ನು ಬಿಟ್ಟು 45 ಸಾವಿರ ಕೋಟಿ ಸಾಲ ಮಾಡಿ ಸುಸ್ತಿದಾರರಾಗಿರುವ ತಮ್ಮ ಸ್ನೇಹಿತರ ಕಂಪೆನಿಗೆ ಕೊಡಿಸಿದ್ದೇಕೆ? ಮೋದಿ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಉದ್ಯೋಗಾವಕಾಶ ನೀಡಿಲ್ಲ. ಸಾಧ್ಯವಿರುವ ಕಡೆಗಳಲ್ಲೂ ಉದ್ಯೋಗಾವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿದರು.
ರೈತರ ಬಗ್ಗೆ ಮಾತನಾಡುವ ಮೋದಿಯವರು ಕೃಷಿ ಸಾಲ ಏಕೆ ಮನ್ನಾ ಮಾಡಲಿಲ್ಲ. ಕರ್ನಾಟಕದ ಸಿಎಂ ಸಿದ್ದರಾಮಯ್ಯ 8500 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿ ರೈತರ ಬಗ್ಗೆ ಮಾತನಾಡುತ್ತಿದೆಯೇ ಹೊರತು ಕಷ್ಟಗಳಿಗೆ ಸ್ಪಂದಿಸುವ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ ಎಂದ ಅವರು, ಈ ಮೂರು ಪ್ರಮುಖ ಪ್ರಶ್ನೆಗಳಿಗೆ ಮೋದಿ ಅವರು ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲುವುದು ನಮ್ಮ ಪ್ರಮುಖ ಗುರಿ. ಅನಂತರ 2019ರ ಲೋಕಸಭೆ ಚುನಾವಣೆ ಬಗ್ಗೆ ಮಾತನಾಡುತ್ತೇವೆ. ಹಾಗಾಗಿ ಕರ್ನಾಟಕ ಪ್ರವಾಸದಲ್ಲಿ ಸ್ಥಳೀಯ ರಾಜಕಾರಣಕ್ಕೆ ಒತ್ತು ನೀಡುವುದಾಗಿ ಹೇಳಿದರು.
ಬಿಜೆಪಿ ಮತ್ತು ಆರ್ಎಸ್ಎಸ್ ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಗಳ ಹಿಡಿತ ಸಾಧಿಸಿದೆ. ಅವನ್ನು ಹಿಡಿತದಿಂದ ಮುಕ್ತಗೊಳಿಸಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುವುದು ನಮ್ಮ ಆದ್ಯತೆ ಎಂದರು.