ಸರ್ ಎಂಬ ಸಂಬೋಧನೆ ಬೇಡ; ಜೀ ಎಂಬ ಗೌರವ ಸೂಚಕ ಉಪಮೇಯಗಳೂ ಬೇಡ; ರಾಹುಲ್ ಎಂದು ಆತ್ಮೀಯವಾಗಿ ಕರೆಯಿರಿ: ಪ್ರೇಕ್ಷಕರ ಮನ ಗೆದ್ದ ರಾಹುಲ್ ಗಾಂಧಿ ಸರಳ ನಡೆ

ಬೆಂಗಳೂರು,ಮೇ8-ಸರ್ ಎಂಬ ಸಂಬೋಧನೆ ಬೇಡ. ಜೀ ಎಂಬ ಗೌರವ ಸೂಚಕ ಉಪಮೇಯಗಳು ಬೇಡ. ರಾಹುಲ್ ಎಂದು ಆತ್ಮೀಯವಾಗಿ ಕರೆಯಿರಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಪ್ರೇಕ್ಷಕರ ಮನಗೆದ್ದ ಪ್ರಸಂಗ ನಡೆಯಿತು.
ನಗರದ ಖಾಸಗಿ ಹೋಟೆಲ್‍ನಲ್ಲಿ ಸಮೃದ್ಧ ಭಾರತ ಫೌಂಡೇಷನ್ ಉದ್ಘಾಟನ ಸಮಾರಂಭದ ನಂತರ ಸಂವಾದದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, ಅತ್ಯಂತ ಸರಳ ನಡೆಯನ್ನು ಪ್ರದರ್ಶಿಸಿ ಆತ್ಮೀಯರಾದರು.

ವಕೀಲ ಶ್ಯಾಮ್ ಸುಂದರ್ ಅವರು ಸರ್ ರಾಹುಲ್ ಗಾಂಧಿ ಎಂದು ಪ್ರಶ್ನೆ ಕೇಳಲು ಆರಂಭಿಸಿದಾಗ, ನನ್ನ ಸರ್ ಎಂದು ಕರೆಯಬೇಡಿ. ರಾಹುಲ್ ಎನ್ನಿ ಸಾಕು ಎಂದರು. ಆದರೂ ವಕೀಲ ಶ್ಯಾಮ್ ಸುಂದರ್ ಅವರು ರಾಹುಲ್ ಜೀ ಎಂದು ಕರೆದು ಪ್ರಶ್ನೆ ಮುಂದುವರೆಸಿದಾಗ, ಜೀ ಎಂಬುದು ಗೌರವವೂ ಅನಗತ್ಯ. ಪ್ರೀತಿಯಿಂದ ರಾಹುಲ್ ಎನ್ನಿ ಸಾಕು ಎಂದು ಮನವಿ ಮಾಡಿಕೊಂಡರು.

ಸಂವಾದದ ಅಂತಿಮ ಹಂತದಲ್ಲಿ ರಾಹುಲ್ ಅವರು ವೇದಿಕೆಯಿಂದ ಇಳಿದು ಜನರ ನಡುವೆಯೇ ಬಂದು ಮಾತನಾಡಿದ್ದು ಇನ್ನಷ್ಟು ಆಶ್ಚರ್ಯ ಮೂಡಿಸಿತು. ಸಂವಾದದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ ಫಿರೋಜ್ ಅಹಮ್ಮದ್, ಶ್ಯಾಮ್ ಸುಂದರ್, ಉದ್ಯಮಿಗಳಾದ ಶಿವಕುಮಾರ್, ಸಂಪತ್‍ಕುಮಾರ್, ಶಿಕ್ಷಣ ಕ್ಷೇತ್ರದ ತ್ರಿಸ್ಥ ರಾಮಮೂರ್ತಿ, ಕೆ.ಸಿ.ರಘು, ಜನರಲ್ ಪುರಾಣಿಕ್, ವಿಶ್ರಾಂತ ಕುಲಪತಿ ಓ.ಅನಂತರಾಮಯ್ಯ ಮತ್ತಿತರರು ಪ್ರಶ್ನೆ ಕೇಳಿದರು.
ಸಾಹಿತಿ ಕಮಲಾ ಹಂಪನಾ ಅವರು ಕನ್ನಡದಲ್ಲೇ ಪ್ರಶ್ನೆ ಕೇಳಿ ಗಮನ ಸೆಳೆದರು. ರಾಹುಲ್ ಅವರು ಶಿಕ್ಷಣ ಎಲ್ಲರ ಕೈಗೆ ಸಿಗುವಂತಾಗಬೇಕು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಪ್ರಮುಖ ಸಂಸ್ಥೆಗಳನ್ನು ಆರ್‍ಎಸ್‍ಎಸ್‍ನ ಹಿಡಿತಕ್ಕೆ ಒಪ್ಪಿಸಿವೆ.

ಅದರಿಂದ ಮುಕ್ತಗೊಳಿಸಿ ಜನರ ಭಾವನೆಗಳಿಗೆ ಸ್ಪಂದಿಸುವಂತೆ ಮಾಡಬೇಕು. ನಾನು ನನ್ನ ಫ್ಯಾನ್ಸಿ ಕನಸುಗಳನ್ನು ನಿಮ್ಮ ಮೇಲೆ ಹೇರುವುದಲ್ಲ. ನಿಮ್ಮ ಕನಸುಗಳನ್ನು ಈಡೇರಿಸುವವನಾಗಬೇಕು ಎಂದು ಪ್ರಶ್ನೆಗಳಿಗೆ ಉತ್ತರಿಸುವ ಮಧ್ಯೆ ಹೇಳಿದರು.
ಬಿಜೆಪಿ ಮತ್ತು ಆರ್‍ಎಸ್‍ಎಸ್ ಮಹಾತ್ಮಾಗಾಂಧಿ, ಅಂಬೇಡ್ಕರ್, ಬಸವಣ್ಣ, ಸುಭಾಷ್ ಚಂದ್ರಬೋಸ್, ಸರದಾರ್ ವಲ್ಲಭ ಭಾಯ್ ಪಟೇಲ್, ಭಗತ್‍ಸಿಂಗ್ ಮತ್ತಿತರರನ್ನು ಪೂಜಿಸುವ ನಾಟಕವಾಡುತ್ತದೆ. ಆದರೆ ಅವರ ವಿಚಾರಧಾರೆಗಳನ್ನು ಕೊಲ್ಲುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ಆರ್‍ಎಸ್‍ಎಸ್ ಮತ್ತು ಅದರ ಬೆಂಬಲದ ಸಂಘಟನೆಗಳ ಮೂಲ ಉದ್ದೇಶ ಅಧಿಕಾರ ಕಬಳಿಸುವುದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಣ್ಣ ಕೈಗಾರಿಕೆಗಳು ಆಡಳಿತ ನಡೆಸುವವರ ಬಳಿಗೆ ತಲುಪುವಂತಾದರೆ ಅಭಿವೃದ್ದಿ ಸಾಧ್ಯವಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಕೇವಲ 10ರಿಂದ 15 ಉದ್ಯಮಿಗಳು ಮಾತ್ರ ಸರ್ಕಾರದ ಬಳಿ ಸಂಪರ್ಕ ಹೊಂದಲು ಸಾಧ್ಯವಾಗಿದೆ. ನೋಟು ಅಮಾನೀಕರಣ ಮತ್ತು ಜಿಎಸ್‍ಟಿ ಸಣ್ಣ ಉದ್ಯಮಗಳನ್ನು ನಾಶ ಮಾಡಿದೆ ಎಂದು ಹೇಳಿದರು.

ಸೌದಿಯ ಅರೇಬಿಯಾದ ಸಂಪತ್ತು ಸ್ಪಷ್ಟತೆ ಇಲ್ಲ. ಅದನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ನಮ್ಮ ದೇಶದ ಸಂಪತ್ತು ಯುವಕರು. ನಾವು ಅವರನ್ನು ಯಾವ ದೇಶಕ್ಕಾದರೂ ಬಿಟ್ಟುಕೊಡುತ್ತಿದ್ದೇವೆ. ಅವರಿಗೆ ಸೂಕ್ತ ಅವಕಾಶ ನೀಡುತ್ತಿಲ್ಲ ಎಂದರು.

ಎಷ್ಟೇ ವಿವಿಗಳನ್ನು ಸ್ಥಾಪಿಸಿದ್ದೇನೆ ಎನ್ನುವುದಕ್ಕಿಂತ ಬಡವ ವರ್ಗದ ಎಷ್ಟು ಜನರಿಗೆ ನಾವು ಶಿಕ್ಷಣ ತಲುಪಿಸಿದ್ದೇವೆ ಎಂಬುದು ಬಹಳ ಮುಖ್ಯ ಎಂದು ರಾಹುಲ್ ಗಾಂಧಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ರಾಜೀವ್ ಗೌಡ, ಚಿತ್ರರಂಗದ ಪ್ರಮುಖರಾದ ಭಾರತೀ ವಿಷ್ಣುವರ್ಧನ್, ರಾಘವೇಂದ್ರ ರಾಜಕುಮಾರ್, ಅಭಿನಯ, ರಾಜೇಂದ್ರ ಸಿಂಗ್ ಬಾಬು, ಸಾಹಿತಿಗಳಾದ ಕಮಲ ಹಂಪನಾ, ಹಂಪ ನಾಗರಾಜಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ