ಶೇ.50ರಷ್ಟು ಮಹಿಳೆಯರಿಗೆ ರಾಜಕೀಯ ಪ್ರಾಬಲ್ಯ ದೊರೆಯಬೇಕಿದೆ: ಎಐಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್

ಬೆಂಗಳೂರು, ಮೇ 8- ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಶೇ.50ರಷ್ಟು ಮಹಿಳೆಯರಿಗೆ ರಾಜಕೀಯ ಪ್ರಾಬಲ್ಯ ದೊರೆಯಬೇಕಿದೆ ಎಂದು ಎಐಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ತಿಳಿಸಿದರು.
ವರದಿಗಾರರ ಕೂಟ ಹಾಗೂ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಮಹಿಳೆಯರು, ಶೋಷಿತರ ಪರ ದನಿ ಎತ್ತಲು ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯನ್ನು ಹುಟ್ಟುಹಾಕಲಾಗಿದೆ ಎಂದರು.

ಯಾವುದೇ ಒಂದು ರಾಜಕೀಯ ಪಕ್ಷದ ಅನುಕೂಲಕ್ಕಾಗಿ ಅಥವಾ ಚುನಾವಣೆಯಲ್ಲಿ ಮತ ವಿಭಜನೆಗೊಳ್ಳಲೆಂದು ನಾವು ಸ್ಪರ್ಧಿಸುತ್ತಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, 52 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾರರು ಪ್ರಜ್ಞಾವಂತರಾಗಿದ್ದಾರೆ. ವಿವೇಚನೆಯಿಂದ ಮತದಾನ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗ ತಾರತಮ್ಯ ಹೋಗಲಾಡಿಸಬೇಕು. ಈ ನಿಟ್ಟಿನಲ್ಲಿ ದನಿ ಎತ್ತಬೇಕಾಗಿದೆ. ಆ ಮೂಲಕ ಮಹಿಳೆಯರೂ ರಾಜಕೀಯದಲ್ಲಿ ಮುಂದುವರೆಯಲು ಪಕ್ಷ ಶ್ರಮಿಸಲಿದೆ. ನಮ್ಮ ಎಲ್ಲ ಅಭ್ಯರ್ಥಿಗಳನ್ನು ಜನತೆ ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ಇದುವರೆಗೆ ಆಡಳಿತ ನಡೆಸಿರುವ ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿಲ್ಲ. ಅದರಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ನೀಡಬೇಕಾದ ಪ್ರಾತಿನಿಧ್ಯ ಇದುವರೆಗೂ ಸಿಕ್ಕಲ್ಲ. ಇದರೊಂದಿಗೆ ಬಡವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಬಹುಪಾಲು ಅವರನ್ನು ತಲುಪುತ್ತಲೇ ಇಲ್ಲ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಬಡವರು ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಪಕ್ಷ ಅಸ್ಥಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.
ಸಂವಾದದಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಪ್ರಧಾನಕಾರ್ಯದರ್ಶಿ ಕಿರಣ್, ವರದಿಗಾರರ ಕೂಟದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ