ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಯಾರೇ ಆಗಲಿ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ: ಹಿರಿಯ ನಟ ಶ್ರೀನಿವಾಸ್‍ಮೂರ್ತಿ

Deve Gowda

ಬೆಂಗಳೂರು, ಮೇ 8- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಯಾರೇ ಆಗಲಿ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಅವರ ವಯಸ್ಸು, ಅರ್ಹತೆಯನ್ನು ಅರಿತು ಮಾತನಾಡಬೇಕು ಎಂದು ಹಿರಿಯ ನಟ ಶ್ರೀನಿವಾಸ್‍ಮೂರ್ತಿ ಹೇಳಿದ್ದಾರೆ.

ಈ ಬಾರಿಯ ವಿಧಾನಸಭೆ ಚುನಾವಣೆ ವೇಳೆ ರಾಜಕೀಯ ವ್ಯಕ್ತಿಗಳು ಪ್ರಚಾರದ ಭರಾಟೆಯಲ್ಲಿ ದೇವೇಗೌಡರ ಕುರಿತು ಏಕವಚನದಲ್ಲಿ ಮಾತನಾಡಿರುವುದನ್ನು ಕೇಳಿದ್ದೇನೆ. ಇದು ನನಗೆ ಅತ್ಯಂತ ಬೇಸರ ತರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳದೆ ಬೇಸರ ವ್ಯಕ್ತಪಡಿಸಿದ್ದಾರೆ.

ದೇವೇಗೌಡರು ಪ್ರಧಾನಿಯಾಗಿದ್ದವರು. ಈಗ ಅವರು ಸುಮಾರು 86 ವರ್ಷ. ಅವರ ವಯಸ್ಸಿಗೆ, ಅರ್ಹತೆಗೆ ತಕ್ಕಂತೆ ಮಾತನಾಡಬೇಕು. ಅದನ್ನು ಬಿಟ್ಟು ಮನಬಂದಂತೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪ್ರಚಾರಕ್ಕೆ ಹೋದೆಡೆಯಲೆಲ್ಲಾ ಎಲ್ಲೂ ಒಂದು ಕೆಟ್ಟ ಶಬ್ಧ ಬಳಸದೆ ಅತ್ಯಂತ ವಿನಯದಿಂದ ಮತ ಕೇಳುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇನೆ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುತ್ತೇವೆ, ಬಡವರ ಸೇವೆ ಮಾಡುತ್ತೇನೆ, ಈ ಬಾರಿ ನಮಗೆ ಅಧಿಕಾರ ಕೊಟ್ಟು ನೋಡಿ ಎಂದು ಬೇಡುತ್ತಿದ್ದಾರೆ. ಇಂತಹ ವಿನಯವಂಥವರಿಗೆ ಹಾಗೂ ಸಮಾಜದ ಏಳ್ಗೆ ಬಯಸುವ ಕುಮಾರಸ್ವಾಮಿ ಅವರನ್ನು ಮತದಾರರು ಬೆಂಬಲಿಸಬೇಕು ಎಂದು ಶ್ರೀನಿವಾಸ್‍ಮೂರ್ತಿ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ