ಬೆಂಗಳೂರು, ಮೇ 8- ಸಮಾಜದ ಎಲ್ಲಾ ಸಮುದಾಯದ ಸಮಸ್ತ ಚಿಂತನೆ ಮಾಡುವ ಉದಾರ ವ್ಯಕ್ತಿತ್ವವುಳ್ಳ ಸಮುದಾಯದ ನಾಯಕರೊಬ್ಬರು ನಾಡಿನ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಶ್ಯಕತೆ ಇದೆ ಎಂದು ಒಕ್ಕಲಿಗ ಜಾಗೃತಿ ಸಮಿತಿ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನಕಾರ್ಯದರ್ಶಿ ಮಹಾಲಿಂಗೇಗೌಡ, ಒಕ್ಕಲಿಗರ ಜಾಗೃತಿ ಸಮಿತಿ ಸಮುದಾಯದ ವಿವಿಧ ಸಂಘಟನೆಗಳೊಂದಿಗೆ ನಡೆಸಿದ ಚಿಂತನ-ಮಂಥನದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
ಸಮಕಾಲೀನ ಪರಿಸ್ಥಿತಿಯಲ್ಲಿ ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿದ್ದು, ಈ ಬಾರಿ ನಾಡಿನ ಅಧಿಕಾರದ ಚುಕ್ಕಾಣಿ ಹಿಡಿಯುವವರು ಸಮಸ್ತರ ಉದ್ದಾರದ ಬಗ್ಗೆ ಚಿಂತನೆ ಮಾಡುವವರಾಗಿರಬೇಕು ಎಂದು ತಿಳಿಸಿದರು.
ಜಾತಿ ವಿಂಗಡಣೆಯನ್ನು ಮಾಡುವ ಮೂಲಕ ಜನರನ್ನು ಮತಬ್ಯಾಂಕನ್ನಾಗಿಸುವ ರಾಜಕಾರಣಿಯನ್ನು ಆಡಳಿತದಿಂದ ದೂರವಿಡಬೇಕು ಹಾಗೂ ಜಾತಿಗಳಲ್ಲಿ ಪಂಗಡಗಳನ್ನು ಹೊಡೆದುಹಾಕುವ ರಾಜಕಾರಣಗಳನ್ನು ದೂರವಿಡಬೇಕು ಎಂದರು.
ಯಾವುದೇ ಜಾತಿಯನ್ನು ಒಡೆಯುವ ಉದ್ದೇಶದಿಂದ ನಾವು ಈ ನಿರ್ಣಯ ತೆಗೆದುಕೊಂಡಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವಂತಹ ನಮ್ಮ ನಾಯಕರು ನಾಡಿನ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.
ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ರಾಮೇಗೌಡ, ಖಜಾಂಚಿ ಹನುಮಂತರಾಯಪ್ಪ, ಭುವನೇಶ್ವರಿ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಮಹದೇವಮ್ಮ ಕೃಷ್ಣಯ್ಯ ಹಾಜರಿದ್ದರು.