ಮಹಾಭಿಯೋಗ: ಕಾಂಗ್ರೆಸ್‍ನ ಇಬ್ಬರು ಸಂಸದರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ

ನವದೆಹಲಿ, ಮೇ 8-ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ವಾಗ್ದಂಡನೆ(ಮಹಾಭಿಯೋಗ) ನೋಟಿಸ್ ತಿರಸ್ಕಾರಗೊಂಡಿರುವುದನ್ನು  ಕಾಂಗ್ರೆಸ್‍ನ ಇಬ್ಬರು ಸಂಸದರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಕಾಂಗ್ರೆಸ್‍ನ ಇಬ್ಬರು ಸಂಸದರು ಈ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದ ಕಾರಣ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಪಂಚ ನ್ಯಾಯಾಧೀಶರ ಪೀಠವು ಈ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ಘೋಷಿಸಿದರು. ಇದರೊಂದಿಗೆ ಸಿಜೆಐ ಅವರ ವಿರುದ್ಧ ಮಹಾಭಿಯೋಗದ ವಿರೋಧ ಪಕ್ಷಗಳ ಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾದಂತಾಗಿದೆ.
ರಾಜ್ಯಸಭಾ ಸದಸ್ಯರಾದ ಪ್ರತಾಪ್ ಸಿಂಗ್ ಬಜ್ವಾ(ಪಂಜಾಬ್) ಹಾಗೂ ಅಮೀ ಹರ್ಷಾದ್ರಿ ಯಾಜ್ಞಿಕ್ (ಗುಜರಾತ್) ಸಲ್ಲಿಸಿದ ಅರ್ಜಿಯ ತ್ವರಿತ ವಿಚಾರಣೆಯನ್ನು ಐವರ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಇದು ನಡೆಸಿತು.
ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್.ಎ. ಬೊಬ್ಡೆ, ಎನ್.ವಿ.ರಮಣ, ಅರುಣ್ ಮಿಶ್ರಾ, ಹಾಗೂ ಆದರ್ಶ್ ಕುಮಾರ್ ಗೋಯೆಲ್ ಅವರನ್ನು ಒಳಗೊಂಡ ಪೀಠ 45 ನಿಮಿಷಗಳ ಕಾಲ ವಿಚಾರಣೆ ಕೈಗೊಂಡಿತು.
ಈ ಪ್ರಕರಣದ ವಿಚಾರಣೆ ನಡೆಸಲು ಐವರು ನ್ಯಾಯಾಧೀಶರ ಸಂವಿಧಾನ ಪೀಠ ರಚನೆ ಬಗ್ಗೆ ಹಿರಿಯ ವಕೀಲ ಮತ್ತು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನ್ಯಾಯಾಲಯದಲ್ಲಿ ವಿಷಯ ಪ್ರಸ್ತಾಪಿಸಿ, ಕೇವಲ ಇಬ್ಬರ ಕಾಂಗ್ರೆಸ್ ಸಂಸದರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದರು. ವಾಗ್ದಂಡನೆ ನೋಟಿಸ್‍ಗಳನ್ನು ನೀಡಿದ್ದ ಇತರ ಆರು ವಿರೋಧಪಕ್ಷಗಳ ಸದಸ್ಯರು ಸುಪ್ರೀಂಕೋರ್ಟ್‍ಗೆ ಅರ್ಜಿಗಳನ್ನು ಸಲ್ಲಿಸದಿರುವ ವಿಷಯವನ್ನು ವೇಣುಗೋಪಾಲ್ ನ್ಯಾಯಾಲಯದ ಗಮನಕ್ಕೆ ತಂದರು. ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರು ವಾಗ್ದಂಡನೆ ನೋಟಿಸ್‍ನನ್ನು ತಿರಸ್ಕರಿಸಿದ ನಂತರ ಕಾಂಗ್ರೆಸ್ ಕೈಗೊಂಡ ನಿಲುವಿಗೆ ಇತರ ಎಲ್ಲ ಪ್ರತಿಪಕ್ಷಗಳು ಬೆಂಬಲ ನೀಡಿಲ್ಲ. ಇದು ಕಾಂಗ್ರೆಸ್ ಕ್ರಮಕ್ಕೆ ಆ ಪಕ್ಷಗಳ ಸಹಕಾರ ಇಲ್ಲ ಎಂಬುದು ಅರಿವಿಗೆ ಬರುತ್ತದೆ ಎಂದು ಅಟಾರ್ನಿ ಜನರಲ್ ಹೇಳಿದರು.
ಈ ಅರ್ಜಿಗೆ ಬೆಂಬಲ ಇಲ್ಲದ ಅಂಶ ಮನವರಿಕೆಯಾದ ನಂತರ ಇಬ್ಬರು ಕಾಂಗ್ರೆಸ್ ಸದಸ್ಯರು ತಮ್ಮ ಅರ್ಜಿಗಳನ್ನು ವಾಪಸ್ ಪಡೆದರು. ಈ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಂಡಿದೆ ಎಂದು ಪೀಠ ಘೋಷಿಸಿತು. ಸಿಬಿಐ ವಿಶೇಷ ನ್ಯಾಯಾಧೀಶ ಲೋಧ ಅವರ ಸಾವು ಸಹಜ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ರಾಜ್ಯಸಭಾ ಸದಸ್ಯರು ಸಿಜೆಐ ದೀಪಕ್ ಮಿಶ್ರಾ ಕಾರ್ಯನಿರ್ವಹಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ವಾಗ್ದಂಡನೆ ನೋಟಿಸ್ ಸಲ್ಲಿಸಿದ್ದರು. ಇದನ್ನು ಸಭಾಪತಿ ವೆಂಕಯ್ಯನಾಯ್ಡು ತಿರಸ್ಕರಿಸಿದ್ದರು. ನಂತರ ಇಬ್ಬರು ಕಾಂಗ್ರೆಸ್ ಸಂಸದರು ಇದನ್ನು ಪಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ