ಬೆಂಗಳೂರು, ಮೇ 8-ಎಲ್ಲೆಡೆ ಎಲೆಕ್ಷನ್ ಟೆನ್ಷನ್ ಆವರಿಸಿದೆ. ಅಭ್ಯರ್ಥಿಗಳಲ್ಲಿ ಕೊನೆ ಕ್ಷಣದ ಆತಂಕ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ತವಕ. ತಮ್ಮ ಪಕ್ಷವನ್ನು ಅಧಿಕಾರದ ಗದ್ದ್ದುಗೆಗೇರಿಸಿ ಮುಖ್ಯಮಂತ್ರಿಗಳಾಗಬೇಕೆಂಬ ಆಕಾಂಕ್ಷೆ ಹಲವರಲ್ಲಿ. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.
ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂಬ ಘೋಷಣೆಯಡಿ ಬಿಜೆಪಿ ಮತ ಪ್ರಚಾರ ನಡೆಸಿದರೆ, ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಎಂಬ ಶೀರ್ಷಿಕೆಯಡಿ ಕಾಂಗ್ರೆಸ್ ಪ್ರಚಾರ ನಡೆಸುತ್ತಿದೆ.
ಜೆಡಿಎಸ್ ಸರ್ಕಾರ ಜನಸಾಮಾನ್ಯರ ಕೈಯಲ್ಲೇ ಎಂಬ ಘೋಷವಾಕ್ಯದೊಂದಿಗೆ ಜೆಡಿಎಸ್ ಪ್ರಚಾರ ನಡೆಸುತ್ತಿದೆ.
ಬಹಿರಂಗ ಪ್ರಚಾರಕ್ಕೆ ಕೇವಲ ಎರಡು ದಿನ ಬಾಕಿ ಇದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ರಾಜಕೀಯ ದಿಗ್ಗಜರು ರಾಜ್ಯಾದ್ಯಂತ ಮಿಂಚಿನ ಸಂಚಾರ ನಡೆಸಿ ಮತಬೇಟೆ ನಡೆಸುತ್ತಿದ್ದಾರೆ.
ವಿಜಯಪುರ, ಕೊಪ್ಪಳ, ಬೆಂಗಳೂರು ಮುಂತಾದೆಡೆ ನರೇಂದ್ರ ಮೋದಿಯವರು ಭಾರೀ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಅವರು ಮಡಿಕೇರಿ ಮತ್ತು ಮಂಗಳೂರು ಭಾಗಗಳಲ್ಲಿ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿಯವರು ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮುಂಬೈ ಕರ್ನಾಟಕದಲ್ಲಿ ಸೋನಿಯಾಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು ಬಿರುಸಿನ ಮತ ಪ್ರಚಾರ ನಡೆಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಾವಣಗೆರೆ ಜಿಲ್ಲೆಯಲ್ಲಿ ಪ್ರಚಾರ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತಮ್ಮ ಅಭ್ಯರ್ಥಿಗಳ ಪರ ಇಂದು ಬಿರುಸಿನ ಪ್ರಚಾರ ನಡೆಸಿದರು.
ತಮ್ಮ ಪ್ರಚಾರ ಕಾರ್ಯಕ್ರಮದುದ್ದಕ್ಕೂ ತಮ್ಮ ತಮ್ಮ ಪಕ್ಷದ ಪ್ರಣಾಳಿಕೆಗಳು, ಜನರಿಗೆ ಆಶ್ವಾಸನೆಗಳ ಸುರಿಮಳೆ ಗೈಯ್ಯಲಾಯಿತು. ವಿವಿಧ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದರು.
ಮೂರೂ ಪಕ್ಷಗಳ ಮುಖಂಡರು ತಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಆತ್ಮವಿಶ್ವಾಸವನ್ನು ಪ್ರಚಾರದ ಸಂದರ್ಭದಲ್ಲಿ ವ್ಯಕ್ತಪಡಿಸಿ ಮತದಾರರನ್ನು ಹುರಿದುಂಬಿಸಿದರು.
ಇತ್ತ ಅಭ್ಯರ್ಥಿಗಳು ಮತದಾರರ ಮನವೊಲಿಸಲು ತಮ್ಮ ಕಸರತ್ತನ್ನು ಮುಂದುವರೆಸಿದ್ದಾರೆ.ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಆಡಳಿತಾರೂಢ ಪಕ್ಷದವರು ತಮ್ಮ ಸಾಧನೆಗಳನ್ನು ಬಿಂಬಿಸುತ್ತಿದ್ದರೆ, ಪ್ರತಿಪಕ್ಷಗಳವರು ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ಹಿಡಿದು ಮತಯಾಚನೆ ಮಾಡುತ್ತಿದ್ದಾರೆ. ಒಟ್ಟಾರೆ ಎಲ್ಲೆಡೆ ಎಲೆಕ್ಷನ್ ಟೆನ್ಷನ್ ಹೆಚ್ಚಾಗಿದೆ.