ಬಾದಾಮಿ, ಮೇ 8-ರಾಜಕೀಯ ಪ್ರೇರಿತ ಐಟಿ ದಾಳಿಗೆ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ದೇವರಾಜ್ ಪಾಟೀಲ್ ಹೇಳಿದ್ದಾರೆ.
ನಗರದ ಕೃಷ್ಣ ಹೆರಿಟೇಜ್ನ ಮಯೂರ ಹೊಟೇಲ್ ಮೇಲೆ ನಿನ್ನೆ ರಾತ್ರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಬಿಜೆಪಿ ರಾಜಕೀಯ ಪ್ರೇರಿತ ದಾಳಿಯಾಗಿದೆ. ಉದ್ದೇಶಪೂರ್ವಕವಾಗಿಯೇ ಈ ದಾಳಿ ನಡೆಸಲಾಗಿದೆ ಎಂದರು.
ಜನರ ಗಮನ ಬೇರೆಡೆ ಸೆಳೆಯಲು ಈ ದಾಳಿ ನಡೆಸಲಾಗಿದೆ. ನಮ್ಮ ಮುಖಂಡರನ್ನು ಟಾರ್ಗೆಟ್ ಮಾಡಿ ಇಂತಹ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ದಾಳಿಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
ನಮ್ಮ ನಾಯಕರು ಪ್ರಚಾರಕ್ಕೆಂದು ಬಂದಾಗ ಈ ಹೊಟೇಲ್ನಲ್ಲಿ ತಂಗಿದ್ದರು. ಅದನ್ನರಿತು ಈ ದಾಳಿ ಮಾಡಲಾಗಿದೆ. ಇದಲ್ಲದೆ, ನಮ್ಮ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿಗಳು ನಡೆಯುತ್ತಿವೆ ಎಂದು ಅವರು ಹೇಳಿದರು.