ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್ – ಎಚ್.ಡಿ.ದೇವೇಗೌಡ

ಮೈಸೂರು, ಮೇ 8-ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಘೋಷಿಸಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲ ಜೆಡಿಎಸ್ ಕಿಂಗ್ ಮೇಕರ್ ಎಂದು ಬೇರೆ ಪಕ್ಷಗಳವರು ಹೇಳುತ್ತಿದ್ದಾರೆ. ಆದರೆ ನಾವ್ಯಾಕೆ ಕಿಂಗ್ ಮೇಕರ್ ಆಗಬೇಕು. ನಾವೇ ಕಿಂಗ್ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಹತ್ತರಿಂದ ಹನ್ನೆರಡು ಮಂದಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಬಿಎಸ್‍ಪಿಯಿಂದಲೂ ಐದಾರು ಮಂದಿ ಗೆಲ್ಲುತ್ತಾರೆ. ಇವರೆಲ್ಲ ನಮ್ಮ ಪಕ್ಷಕ್ಕೆ ಬೆಂಬಲ ಕೊಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ನಾವು ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ. ಎಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷೇತರರು ನಿಮಗೇಕೆ ಬೆಂಬಲ ನೀಡುತ್ತಾರೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು ಚುನಾವಣೆ ಸಂದರ್ಭದಲ್ಲಿ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ನಾವೇ ಸ್ಪರ್ಧಿಸಿ ನಿಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಅವರ ಬೆಂಬಲ ನಮಗೆ ಸಿಗುವುದು ಖಂಡಿತ ಎಂದು ಭವಿಷ್ಯ ನುಡಿದರು.
ನಾನು ಹೈದರಾಬಾದ್-ಕರ್ನಾಟಕ, ಮುಂಬೈ-ಕರ್ನಾಟಕ ಪ್ರದೇಶಗಳಲ್ಲಿ ಸಂಚಾರ ಮಾಡಿದ್ದೇನೆ. ಅಲ್ಲಿನ ಜನರು ಬಿಜೆಪಿ , ಕಾಂಗ್ರೆಸ್ ಪಕ್ಷಗಳ ಆಡಳಿತ ನೋಡಿದ್ದೇವೆ. ಈ ಬಾರಿ ಜೆಡಿಎಸ್ ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ನೋಡುತ್ತೇವೆ ಎಂದು ಹೇಳಿದ್ದಾರೆ ಎಂದರು.
ಯಾವುದೇ ಸರ್ವೆಗಳನ್ನು ನಾನು ನಂಬುವುದಿಲ್ಲ. ಸರ್ವೆ ಮಾಡಿಸಿರುವವರು ಹಣ ಇರುವವರು. ಹಾಗಾಗಿ ಸರ್ವೆಗಳು ಹಣಕೊಟ್ಟವರ ಪರ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಸರ್ವೆ ನಂಬುವುದಿಲ್ಲ. ಸರ್ವೆ ಮಾಡಿಸಲು ನಮ್ಮ ಬಳಿ ಹಣವೂ ಇಲ್ಲ. ನಾವು ಸರ್ವೆ ಮಾಡಿಸುವುದೂ ಇಲ್ಲ. ನಮಗೆ ಅದು ಬೇಕಾಗಿಯೂ ಇಲ್ಲ ಎಂದು ಹೇಳಿದರು.
ಮೈಸೂರಿನ ಕೃಷ್ಣರಾಜ ಹಾಗೂ ವರುಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದಿಲ್ಲ. ಆದರೆ ಟಿ.ನರಸೀಪುರ ಸೇರಿದಂತೆ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ದೇವೇಗೌಡರು ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವೇಕೆ ಪ್ರಚಾರಕ್ಕೆ ಹೋಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಅಲ್ಲಿ ನಮ್ಮ ಜಿ.ಟಿ.ದೇವೇಗೌಡ ಒಬ್ಬನೇ ಸಾಕು. ಅವನೇ ಹೋರಾಟ ಮಾಡಿ ಸಿದ್ದರಾಮಯ್ಯ ವಿರುದ್ಧ ಗೆಲುವು ಸಾಧಿಸುತ್ತಾನೆ ಎಂದು ಉತ್ತರಿಸಿದರು.
ನಾನು ಇದ್ಯಾವುದನ್ನೂ ಭ್ರಮೆಯಿಂದ ಮಾತನಾಡಿಲ್ಲ. ಈಗ ನಾನು ಹೇಳಿರುವುದೆಲ್ಲ ಸತ್ಯವಾಗಲಿದೆ. 12 ರಂದು ಚುನಾವಣೆ ಆಗುತ್ತದೆ, 15 ರಂದು ಫಲಿತಾಂಶ ಬರುತ್ತದೆ. ಆಗ ನೋಡಿ ಎಂದು ಮಾರ್ಮಿಕವಾಗಿ ನುಡಿದರು.
ಜೆಡಿಎಸ್ ಪ್ರಣಾಳಿಕೆ ರೈತ, ಮಹಿಳೆ, ಬಡವರ, ಸಮಾಜಮುಖಿ ಅಭಿವೃದ್ಧಿ ಹೊಂದುವಂತಹ ಪ್ರಣಾಳಿಕೆಯಾಗಿದೆ.
ಬೇರೆ ಪಕ್ಷಗಳಿಗಿಂತ ನಮ್ಮ ಪ್ರಣಾಳಿಕೆ ಅತ್ಯುತ್ತಮವಾಗಿದೆ. ರಾಜ್ಯದ ಪ್ರತಿಯೊಂದು ಕ್ಷೇತ್ರ ಮತ್ತು ಎಲ್ಲ ವರ್ಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.
ಕುಮಾರಸ್ವಾಮಿಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದರೂ ಕಳೆದ ಎರಡೂವರೆ ವರ್ಷಗಳಿಂದಲೂ ಹಗಲಿರುಳೆನ್ನದೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾನೆ. ಆತನ ಶ್ರಮಕ್ಕೆ ಜನರಿಂದ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಬಿಜೆಪಿ ಹಾಗೂ ಕಾಂಗ್ರೆಸ್‍ನವರು ದೇವೇಗೌಡ ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ಕಾಶ್ಮೀರದ ಸಮಸ್ಯೆ, ಗೋದ್ರಾ ಸಮಸ್ಯೆ, ಈದ್ಗಾ ಸಮಸ್ಯೆಯನ್ನು ಬಗೆಹರಿಸಿದವರು ಯಾರು ಎಂಬುದನ್ನು ಕಾಂಗ್ರೆಸ್‍ನವರು ಹೇಳಲಿ ಎಂದು ದೇವೇಗೌಡರು ಸವಾಲು ಹಾಕಿದರು.
ಕಾವೇರಿ ತೀರ್ಪಿನಲ್ಲಿ ಕರ್ನಾಟಕಕ್ಕೆ 14 ಟಿಎಂಸಿ ನೀರು ಉಳಿತಾಯವಾಗಿದೆಯಲ್ಲ. ಅದನ್ಯಾರು ಮಾಡಿದ್ದೆಂದು ಹೇಳಲಿ. ನಮ್ಮ ಕಾಲದಲ್ಲಿ ಉತ್ತಮ ಲಾಯರನ್ನು ಇಟ್ಟು ಆಗಲೇ ನ್ಯಾಯ ಕೊಡಿಸಿದ್ದೆವು. ಹಾಗಾಗಿ 14 ಟಿಎಂಸಿ ನೀರು ಉಳಿಯುವಂತಾಯಿತು. ಈ ದೇವೇಗೌಡನ ಹೆಸರನ್ನು ಯಾರೂ ಹೇಳಲ್ಲ ಎಂದರು.
ಅಂಬರೀಶ್ ಬಗ್ಗೆ ನಾನು ಹೇಳುವುದಿಲ್ಲ. ಅವರನ್ನು ನಾನು ಭೇಟಿ ಮಾಡಿ ಮಾತನಾಡಿಸುವುದಿಲ್ಲ. ಅವರ ಆತ್ಮ ಸಾಕ್ಷಿಗೆ ಅನುಗುಣವಾಗಿ ಯಾರಿಗೆ ಬೆಂಬಲ ನೀಡಬೇಕೆಂದು ಅನ್ನಿಸುತ್ತದೋ ಅವರಿಗೆ ಬೆಂಬಲಿಸಲಿ ಎಂದು ಹೇಳಿದರು.
ಕೇರಳದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಕೃಷ್ಣಕುಟ್ಟಿ, ಚಾಮರಾಜಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪೆÇ್ರ.ಕೆ.ಎಸ್.ರಂಗಪ್ಪ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ