ಬಿಜೆಪಿ ಆಧುನಿಕ ಭಾರತ ನಿರ್ಮಾಣಕ್ಕೆ ಒತ್ತು ನೀಡಿರುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಪ್ರತಿಪಕ್ಷಗಳಿಗೆ ಪ್ರಧಾನಿ ತಿರುಗೇಟು

ಬೆಂಗಳೂರು, ಮೇ 7- ತಂತ್ರಜ್ಞಾನ ಬಳಕೆ ಕುರಿತಂತೆ ಪ್ರತಿಪಕ್ಷಗಳು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಆಧುನಿಕ ಭಾರತ ನಿರ್ಮಾಣಕ್ಕೆ ಒತ್ತು ನೀಡಿರುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ತಂತ್ರಜ್ಞಾನದ ಪ್ರಾಮುಖ್ಯತೆ ಹೆಚ್ಚಳ ಮಾಡುವ ಕುರಿತ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಆ್ಯಪ್ ಮೂಲಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮೋದಿಯವರು ಆಧಾರ್ ಮತ್ತು ಇವಿಎಂಗಳಲ್ಲಿ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ಈ ರೀತಿ ತಿರುಗೇಟು ನೀಡಿದರು.

ನಮ್ಮ ಪಕ್ಷ ಆಧುನಿಕ ಭಾರತಕ್ಕೆ ಮುನ್ನುಡಿ ಬರೆಯುತ್ತಿದೆ. ಕೌಶಲ್ಯಅಭಿವೃದ್ಧಿ ಮತ್ತು ಹೊಸ ಆವಿಷ್ಕಾರಗಳಿಗೆ ಒತ್ತು ನೀಡುವುದನ್ನು ಮುಂದುವರೆಸುತ್ತೇವೆ ಎಂದು ಅವರು ಹೇಳಿದರು.
ಮೇ 12ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ನೀವು ಶ್ರಮ ವಹಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಯುವ ಮೋರ್ಚಾ ಪದಾಧಿಕಾರಿಗಳಿಗೆ ಮೋದಿ ಕಿವಿಮಾತು ಹೇಳಿದರು.

ಕರ್ನಾಟಕದಲ್ಲಿ 45 ಡಿಗ್ರಿ ಉಷ್ಣಾಂಶವಿದೆ. ಈ ಉಷ್ಣಾಂಶವನ್ನು ಲೆಕ್ಕಿಸದೆ ಅಲ್ಲಿನ ಜನ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇಂತಹ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಅಲ್ಲಿನ ಜನ ಆಡಳಿತರೂಢ ಪಕ್ಷವನ್ನು ಕಿತ್ತೊಗೆಯಲು ಬಿಜೆಪಿಯನ್ನು ಬೆಂಬಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ನೀವು ಕಾರ್ಯಪ್ರವೃತ್ತರಾಗುವಂತೆ ಅವರು ಕರೆ ನೀಡಿದರು.

ನಾನು ನಿನ್ನೆ ನಾಲ್ಕು ಕಡೆ ರ್ಯಾಲಿ ನಡೆಸಿದ್ದೇನೆ. ನಾಳೆ ಮತ್ತೆ ಮೂರು ಕಡೆ ರ್ಯಾಲಿ ನಡೆಸಲಿದ್ದೇನೆ. ಅಲ್ಲಿನ ಮತದಾರರ ನಾಡಿ ಮಿಡಿತ ನಾನು ಬಲ್ಲೆ. ಅವರಿಗೆ ಬಿಜೆಪಿ ಬಗ್ಗೆ ಒಲವಿದೆ. ಆ ಒಲವನ್ನು ಮತಗಳನ್ನಾಗಿ ಪರಿವರ್ತಿಸುವ ಹೊಣೆ ನಿಮ್ಮದು ಎಂದರು.
ಯುವ ಮೋರ್ಚಾ ಪದಾಧಿಕಾರಿಗಳು ಬಿಜೆಪಿಯ ದೊಡ್ಡ ಆಸ್ತಿ. ನಿಮ್ಮ ಕೊಡುಗೆ ನಮಗೆ ಅನುಪಮವಾದದ್ದು. ನಿಮ್ಮ ಶಕ್ತಿಯಿಂದಲೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದ ತಂತ್ರಜ್ಞಾನ ಅಭಿವೃದ್ಧಿಯನ್ನು ಕೆಲವರು ಸಹಿಸುತ್ತಿಲ್ಲ. ಅವರು ತಂತ್ರಜ್ಞಾನದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಯಾವುದೇ ಕುತಂತ್ರಗಳಿಗೆ ಬೆಲೆ ಕೊಡಬೇಡಿ. ನೀವು ತಂತ್ರಜ್ಞಾನ ಬಳಸುವ ಮೂಲಕ ನಿಮ್ಮ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಇಡೀ ವಿಶ್ವವೇ ತಂತ್ರಜ್ಞಾನದ ಹಿಂದೆ ಬಿದ್ದಿದೆ. ಇದು ತಂತ್ರಜ್ಞಾನದ ಕಾಲ. ತಂತ್ರಜ್ಞಾನದಲ್ಲಿ ಭಾರತ ಹಿಂದೆ ಸರಿಯುವುದನ್ನು ನಾನು ಸಹಿಸುವುದಿಲ್ಲ. ಎಲ್ಲಾ ಮುಂದುವರೆದ ರಾಷ್ಟ್ರಗಳೊಂದಿಗೂ ಪೈಪೆÇೀಟಿ ನಡೆಸುವಂತೆ ಭಾರತವನ್ನು ಸಶಕ್ತಗೊಳಿಸುವುದೇ ನನ್ನ ಸರ್ಕಾರದ ಉದ್ದೇಶ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ