ಬೆಂಗಳೂರು, ಮೇ 7- ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿರುವ ಭಾಷೆ ಸಾರ್ವಜನಿಕ ಜೀವನದಲ್ಲಿರುವವರ ಘನತೆಯನ್ನು ಕುಂದುವಂತೆ ಮಾಡಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೃದು ಶೈಲಿಯಲ್ಲೇ ಮೋದಿ ವಿರುದ್ಧ ಖಾರವಾಗಿ ಹೇಳಿಕೆ ನೀಡಿದರು.
ಹಿಂದಿನ ಯಾವ ಪ್ರಧಾನಿಯೂ ಒಂದು ಚುನಾವಣೆಗೆ ತಮ್ಮ ಅಧಿಕಾರವನ್ನು ಈ ಮಟ್ಟಕ್ಕೆ ದುರುಪಯೋಗಪಡಿಸಿಕೊಂಡಿರಲಿಲ್ಲ.
ಚುನಾವಣಾ ಭಾಷಣದಲ್ಲಿ ಭಾಷೆ ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಮೋದಿಯವರು ಅವೆಲ್ಲವನ್ನೂ ಮೀರಿ ಮಾತನಾಡುತ್ತಿದ್ದಾರೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿಯವರು ತಮ್ಮ ಭಾಷಣದ ಮೂಲಕ ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮ್ಮ ಪರವಾಗಿ ಒಂದಷ್ಟು ಜನರನ್ನು ಗುಂಪುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ದೇಶದ ಸಮಗ್ರತೆಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಈಗಲಾದರೂ ಮೋದಿ ಅವರು ಪಾಠಕಲಿತು ವಿಭಜನೆ ನೀತಿ ಕೈಬಿಡಲಿ ಎಂದು ಸಲಹೆ ನೀಡಿದರು.
2013ರಲ್ಲಿ ಬ್ಯಾಂಕುಗಳ ಅನುತ್ಪಾದಕ ಆಸ್ತಿ 28 ಸಾವಿರ ಕೋಟಿಯಷ್ಟಿತ್ತು. ಆದರೆ, ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 1.11ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಎಷ್ಟು ಹದಗೆಡಿಸಿದ್ದಾರೆ ಎಂದು ತಿಳಿಯುತ್ತದೆ.
ದೇಶದ ಜಿಡಿಪಿ 7.8ರಷ್ಟಿತ್ತು. ಈಗ ಶೇ.50ರಷ್ಟು ಕುಸಿದಿದೆ. ಎನ್ಡಿಎ ಅವಧಿಯಲ್ಲಿ ಜಿಡಿಪಿ ಏರಿಕೆಯೇ ಆಗಿಲ್ಲ. ಇಡೀ ವಿಶ್ವ ಆರ್ಥಿಕಾಭಿವೃದ್ಧಿಯತ್ತ ಮುನ್ನಡೆಯುತ್ತಿರುವಾಗ ಭಾರತ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಯೆಟ್ನಾಂನಂತಹ ದೇಶಗಳೇ ಅಭಿವೃದ್ಧಿಯತ್ತ ಮುಖ ಮಾಡಿರುವಾಗ ಸಾಕಷ್ಟು ನೈಸರ್ಗಿಕ ಸಂಪನ್ಮೂಲ ಹೊಂದಿರುವ ಭಾರತ ಹಿನ್ನಡೆ ಅನುಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ನೋಟು ಅಮಾನೀಕರಣ ಹಾಗೂ ಅವೈಜ್ಞಾನಿಕ ಜಿಎಸ್ಟಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. 13ರಿಂದ 24 ವರ್ಷ ವಯಸ್ಸಿನ 75 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ, ತಮ್ಮ ತಪ್ಪು ನಿರ್ಧಾರದಿಂದ ಇರುವ ಉದ್ಯೋಗವನ್ನೂ ಕಸಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶದ ಅಭಿವೃದ್ಧಿ ಕುಂಠಿತವಾಗಲು ಪ್ರಮುಖ ಕಾರಣವೆಂದರೆ ಬಂಡವಾಳ ಹೂಡಿಕೆಯಾಗದೆ ಇರುವುದು ಎಂದ ಅವರು, ದೇಶದಲ್ಲಿ ಪ್ರತಿ ದಿನ ಆದಾಯ ತೆರಿಗೆ ದಾಳಿಗಳು ನಡೆಯುತ್ತಿದೆ. ಇದರಿಂದ ವ್ಯಾಪಾರಿ ವರ್ಗ ಅಸಂತೋಷಗೊಂಡಿದೆ. ದುರುದ್ದೇಶಪೂರಿತ ದಾಳಿಗಳಿಂದ ಆತಂಕಕ್ಕೊಳಗಾಗಿರುವ ಉದ್ಯಮಿಗಳು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ನೋಟು ಅಮಾನೀಕರಣ ಮತ್ತು ಜಿಎಸ್ಟಿಯಿಂದಾಗಿ ಗ್ರಾಮೀಣ ಭಾಗದ ಆರ್ಥಿಕತೆ ಸಂಪೂರ್ಣ ಕುಸಿತಗೊಂಡಿದೆ. ದೇಶದ ಆರ್ಥಿಕ ಸ್ಥಿತಿ ಹಿನ್ನಡೆಯಾಗುತ್ತಿದ್ದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹವರಿಂದ ಅಭಿವೃದ್ಧಿ ಹೆಚ್ಚುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಡವಾಳ ಹೂಡಿಕೆಯಲ್ಲಿ ಗುಜರಾತನ್ನು ಹಿಂದಿಕ್ಕಿ ಕರ್ನಾಟಕ ನಂ.1 ಸ್ಥಾನಕ್ಕೆ ಬಂದಿದೆ. ಕ್ರಿಯಾಶೀಲ ನಗರಗಳಲ್ಲಿ 12ನೇ ಸ್ಥಾನದಲ್ಲಿದ್ದ ಬೆಂಗಳೂರು ಮೊದಲನೇ ಸ್ಥಾನಕ್ಕೇರಿದೆ. ಐಟಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನ್ವೇಷಣಾತ್ಮಕ ವಿಷಯಗಳಿಂದ ದೇಶದ ಗಮನ ಸೆಳೆದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಇಂತಹ ಹಲವಾರು ಕಾರಣಗಳಿವೆ ಎಂದರು.
ಅಭಿವೃದ್ಧಿಯಲ್ಲಿ ಕರ್ನಾಟಕ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಾರೆ. ಆದರೆ, ಅದು ಯಾವ ರೀತಿ ದ್ವಿಗುಣಗೊಳಿಸುತ್ತಾರೆ ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಕೇವಲ ಭರವಸೆ ನೀಡುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೃಷಿ, ಆರೋಗ್ಯ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಮುನ್ನಡೆ ಸಾಧಿಸಿದೆ. ಸಾಮಾಜಿಕ ಕ್ಷೇತ್ರಕ್ಕೆ ಶೇ.40ರಷ್ಟು ಅನುದಾನ ನೀಡಿದೆ ಎಂದು ಪ್ರತಿಪಾದಿಸಿದರು.
ಪೆಟ್ರೋಲ್ ದರ ಏರಿಕೆಗೆ ಆಕ್ಷೇಪ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ದಾಖಲಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ಭಾರತದಲ್ಲಿ ಮಾತ್ರ ಡೀಸೆಲ್ ಮತ್ತು ಪೆಟ್ರೋಲ್ ದರ ಸರ್ವಕಾಲಿಕ ದಾಖಲೆಯಾಗುವಂತೆ ಏರಿಕೆಯಾಗಿರುವುದು ಆಘಾತಕಾರಿ ಬೆಳವಣಿಗೆ. ಈ ರೀತಿ ಹಿಂದೆಂದೂ ಆಗಿರಲಿಲ್ಲ. ಯಾವ ಕಾರಣಕ್ಕೆ ಡೀಸೆಲ್, ಪೆಟ್ರೋಲ್ ದರ ಏರಿಕೆಯಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.
ನೋಟು ಅಮಾನೀಕರಣ ವಿಷಯದಲ್ಲಿ ಆರ್ಬಿಐ ಗೌರ್ನರ್ ಮೇಲೆ ವ್ಯಾಪಕ ಟೀಕೆ ಕೇಳಿ ಬಂದಿದೆ. ಈ ಹಿಂದೆಲ್ಲಾ ಆರ್ಬಿಐ ಗೌರ್ನರ್ ಕಚೇರಿಯ ಬಗ್ಗೆ ಜನರಿಗೆ ನಂಬಿಕೆ ಇತ್ತು. ಆದರೆ, ಅವರ ನಡವಳಿಕೆ ಅನುಮಾನ ಹುಟ್ಟಿಸುವಂತೆ ಇವೆ. ದೇಶದ ಜನ ಕೇಳುವ ಪ್ರಶ್ನೆಗೆ ಆರ್ಬಿಐ ಗೌರ್ನರ್ ನಂಬಲರ್ಹ ಉತ್ತರ ನೀಡಬೇಕಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಕೇಳಲಾದ ಪ್ರಶ್ನೆಗೆ, ಉತ್ತರಿಸಿದ ಅವರು, ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವವಿದೆ. ರಾಜಕೀಯ ಪಕ್ಷವಾಗಿ ಹೊಂದಾಣಿಕೆ ವಿಷಯದಲ್ಲಿ ನಮಗೂ ಗಡಿ ರೇಖೆಗಳಿವೆ. ಸದ್ಯಕ್ಕೆ ಹೊಂದಾಣಿಕೆ ಸಂದರ್ಭ ಉದ್ಭವಿಸಿಲ್ಲ. ಈ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ತಿಳಿಸಿದರು.
ದೇಶದ ವಿತ್ತೀಯ ಕೊರತೆಯನ್ನು ಮನಸೋಇಚ್ಚೆ ಲೆಕ್ಕ ಹಾಕಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಪ್ಪತ್ತು ವರ್ಷಗಳಲ್ಲಿ ದೇಶ ಕಂಡ ಅಭಿವೃದ್ಧಿಯನ್ನು ಮರೆಮಾಚಿರುವ ಮೋದಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆಲ್ಲಾ ಮನಮೋಹನ್ಸಿಂಗ್ ಮೌನಿ ಎಂದು ಮೋದಿ ಹೇಳುತ್ತಿದ್ದರು. ಆದರೆ, ಈಗ ಅವರೇ ಪ್ರಧಾನಿಯಾಗಿ ನಾಲ್ಕು ವರ್ಷಗಳಾದರೂ ಪತ್ರಿಕಾಗೋಷ್ಠಿಯನ್ನು ಎದುರಿಸಿಲ್ಲ. ಈ ಮೊದಲು ಅವರು ನನಗೆ ಹೇಳುತ್ತಿದ್ದ ನೀತಿ ಪಾಠ ಅವರೇ ಅನುಸರಿಸಲಿ ಎಂದು ಮನಮೋಹನ್ಸಿಂಗ್ ಸವಾಲು ಹಾಕಿದರು.