ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಶೇ.4.6ರಷ್ಟು ಹೆಚ್ಚಳ

ಬೆಂಗಳೂರು, ಮೇ 7- 2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಫಲಿತಾಂಶದಲ್ಲಿ ಶೇ.4.6ರಷ್ಟು ಹೆಚ್ಚಳವಾಗಿದ್ದು, ಈ ಬಾರಿಯೂ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಗ್ರಾಮೀಣ ಪ್ರದೇಶದ ಬಾಲಕಿಯರೇ ಹೆಚ್ಚು ಮಂದಿ ಉತ್ತೀರ್ಣರಾಗಿದ್ದು, ಕಳೆದ ಬಾರಿ ಶೇ.67.87ರಷ್ಟಿದ್ದ ಒಟ್ಟಾರೆ ಫಲಿತಾಂಶ ಈ ಬಾರಿ 71.93ರಷ್ಟು ಬಂದಿದೆ.
8,38,088 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, ಅದರಲ್ಲಿ 6,02,802 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಶೇ.100ರಷ್ಟು ಅಂದರೆ 625 ಅಂಕಗಳಿಸಿದ್ದು, 8 ವಿದ್ಯಾರ್ಥಿಗಳು 624, 12 ವಿದ್ಯಾರ್ಥಿಗಳು 623, 22 ವಿದ್ಯಾರ್ಥಿಗಳು 622, 35 ವಿದ್ಯಾರ್ಥಿಗಳು 621, 39 ವಿದ್ಯಾರ್ಥಿಗಳು 620 ಅಂಕಗಳಿಸಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಒಟ್ಟು ಶೇ.75.12ರಷ್ಟು ಫಲಿತಾಂಶ ದೊರೆತಿದ್ದು, 2,85,594 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 2,14,545 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಅನುದಾನಿತ ಶಾಲೆಯಲ್ಲಿ 2,08,227 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 1,58,819 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.76.27ರಷ್ಟು ಫಲಿತಾಂಶ ಬಂದಿದೆ.

ಅನುದಾನರಹಿತ ಶಾಲೆಗಳಲ್ಲಿ 2,50,640 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 2,08,154ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು 83.05ರಷ್ಟು ಫಲಿತಾಂಶ ದೊರೆತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ