ಬೆಂಗಳೂರು,ಮೇ7-ರೈತರ, ನೇಕಾರರ, ಮೀನುಗಾರರ, ಸ್ತ್ರೀ ಶಕ್ತಿ ಸಂಘಗಳ ಬಡ್ಡಿ ಸಹಿತ ಸಾಲಮನ್ನಾ, ಮಹಿಳೆಯರ, ಮಕ್ಕಳ ಹಾಗೂ ಬಡ ಜನರ ಕಲ್ಯಾಣಕ್ಕೆ ಒತ್ತು, ಶಿಕ್ಷಣಕ್ಕೆ ಆದ್ಯತೆ, ಕೈಗಾರಿಕೆ, ವಿದ್ಯುತ್ ಸಮಸ್ಯೆಗೆ ಪರಿಹಾರ, ಭ್ರಷ್ಟಾಚಾರಕ್ಕೆ ಕಡಿವಾಣ, ಹೊಸ ಉದ್ಯೋಗಗಳ ಸೃಷ್ಟಿ, ಆಡಳಿತದಲ್ಲಿ ಮಹತ್ತರ ಸುಧಾರಣೆ, ಸೇರಿದಂತೆ ಹತ್ತು ಹಲವು ಭರವಸೆಗಳನ್ನು ಇಂದು ಜೆಡಿಎಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ.
ಮಾಜಿ ಮುಖ್ಯಮಂತ್ರಿ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ ಎಂಬ 63 ಪುಟಗಳ ಜೆಡಿಎಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ರಾಷ್ಟ್ರ ಕವಿ ಕುವೆಂಪು ಅವರ ರೈತ ಗೀತೆಯೊಂದಿಗೆ ಆರಂಭಗೊಳ್ಳುವ ಪ್ರಣಾಳಿಕೆಯಲ್ಲಿ ಉತ್ತಮ, ಜನಪರ, ಜಾತ್ಯತೀತ ತತ್ವದ ಸರ್ವಾಂಗೀಣ ಅಭಿವೃದ್ದಿಯ ಉದ್ದೇಶ ಹೊಂದಿರುವ ಜಾತ್ಯತೀತ ಜನತಾದಳವನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸುವಂತೆ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮನವಿ ಮಾಡಿದ್ದಾರೆ.
ಜನಪರವಾದ ಅಭಿವೃದ್ದಿ ನನ್ನ ಆದ್ಯತೆಯಾಗಿದ್ದು, ಅದಕ್ಕೆ ಜನರ ಮನ್ನಣೆಯನ್ನು ಬಯಸುತ್ತಿರುವುದಾಗಿ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಗ್ರಾಮ ವಾಸ್ತವ್ಯ ಮುಂದುವರಿಕೆ, 24 ತಾಸು ನಿರಂತರ 3ಫೇಸ್ ವಿದ್ಯುತ್ ಸೌಲಭ್ಯ, ಸ್ನಾತಕೋತ್ತರ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ , ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ , ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಡೊನೇಷನ್ ಹಾವಳಿಗೆ ಕಡಿವಾಣ, ಪ್ರತಿ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ರಾಂತಿ, ವಿದ್ಯುತ್ ಸ್ವಾವಲಂಬಿ ಕರ್ನಾಟಕ ಸೇರಿದಂತೆ ಹತ್ತು ಹಲವು ಮಹತ್ವದ ಭರವಸೆಗಳನ್ನು ರಾಜ್ಯದ ಜನತೆಗೆ ನೀಡಲಾಗಿದೆ.
ಗ್ರಾಮೀಣ ಪ್ರದೇಶದ ಯುವಕರಿಗೆ ಮಾಸಿಕ 7 ರಿಂದ 8 ಸಾವಿರ ವೇತನ ನೀಡಿ ಸರ್ಕಾರಿ ಭೂಮಿಯಲ್ಲಿ ಅರಣ್ಯ ಬೆಳೆಸಿ ನಿರುದ್ಯೋಗ ನಿವಾರಣೆ ಹಾಗೂ ಪರಿಸರ ಸಂರಕ್ಷಣೆಗೆ ಕ್ರಮಕೈಗೊಳ್ಳುವುದಾಗಿ ಪ್ರಸ್ತಾಪಿಸಲಾಗಿದೆ.
ರೈತರ ಅಭ್ಯುದಯದ ಯೋಜನೆಗಳು, ಮಹಿಳಾ ಕ್ಷೇಮಾಭಿವೃದ್ಧಿಯ ಚಿಂತನೆಗಳು, ಕೃಷಿ ವಲಯಕ್ಕೆ ನೀಡಿದ ಆದ್ಯತೆಗಳು , ಹಿರಿಯ ಚೇತನಗಳಿಗೆ ಅವರ ಕಲ್ಪನೆಗಳು, ಪರಿಸರ ಸಂರಕ್ಷಣೆಗೆ ಅವರು ಹಾಕಿಕೊಂಡಿರುವ ಯೋಜನೆಗಳು, ಮಹಿಳಾ ಸಬಲೀಕರಣಕ್ಕೆ ಮಾಡಿರುವ ಭವಿಷ್ಯದ ಯೋಜನೆಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕೈಗೊಳ್ಳಲಿರುವ ಕ್ರಮಗಳು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಜೆಡಿಎಸ್ನ ಆಶಯಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಕುಮಾರಸ್ವಾಮಿ ಅವರು ತೆರೆದಿಟ್ಟಿದ್ದಾರೆ.
ರೈತರ ಸಾಲ ಸಂಪೂರ್ಣ ಮನ್ನಾ: ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಜ್ಯದ ರೈತರು ಸಹಕಾರಿ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾಡಿರುವ 53 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡುವ ಮೂಲಕ ಸಾಲ ಮುಕ್ತ ಅನ್ನದಾತನನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಬೆಳೆಗಳಿಗೆ ಉತ್ತಮ ಬೆಲೆ ಒದಗಿಸಿಕೊಟ್ಟು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರುವ ಭರವಸೆ ನೀಡಿದ್ದಾರೆ.
ಜೆಡಿಎಸ್ ಸರ್ಕಾರ ಜನಸಾಮಾನ್ಯರ ಕೈಯಲ್ಲಿ ಅಧಿಕಾರ, ಇದು ರೈತ ಪ್ರಣಾಳಿಕೆ ಎಂದು ಹೇಳಿರುವ ಕುಮಾರಸ್ವಾಮಿ ಅವರು, ಪ್ರತಿ ಜಿಲ್ಲೆಯ ರೈತರನ್ನೊಳಗೊಂಡ ಕರ್ನಾಟಕ ರಾಜ್ಯ ರೈತ ಸಮಾಲೋಚಕ ಸಂಘ ಸ್ಥಾಪನೆ, ಪ್ರತಿ ತಿಂಗಳು ಮುಖ್ಯಮಂತ್ರಿಯೊಡನೆ ಸಮಾಲೋಚನೆ, ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಕೃಷಿ ಬ್ಯಾಂಕ್ ಸ್ಥಾಪಿಸಿ ಸರಿಯಾದ ಸಮಯಕ್ಕೆ ಅಧಿಕ ಇಳುವರಿಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮುಂತಾದ ಅವಶ್ಯ ಸಾಮಾಗ್ರಿಗಳು ಸಬ್ಸಿಡಿ ದರದಲ್ಲಿ ದೊರಕುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರೈತ ಸಾರಥಿ ಸ್ಥಾಪನೆ:
ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳು, ಕೃಷಿ ಸಲಕರಣೆಗಳನ್ನು ಸರ್ಕಾರವೇ ಖರೀದಿಸಿ ಇಡುತ್ತದೆ. ರೈತರು ಇದನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಪ್ರತಿ ಹೋಬಳಿಗೊಂದರಂತೆ ಶೀತಲಗೃಹಗಳ ನಿರ್ಮಾಣ, ರೈತರು ಬೆಳೆದ ಉಪಕರಣಗಳನ್ನು ಮಾರುಕಟ್ಟೆಗೆ ಸಾಗಿಸಲು ಉಚಿತ ಸಾರಿಗೆ ವ್ಯವಸ್ಥೆಗೆ ರೈತ ಸಾರಥಿ ಸ್ಥಾಪನೆ.
ಇಸ್ರೇಲ್ ಮಾದರಿ ಕೃಷಿಗೆ ಪೆÇ್ರೀ ವಿಶ್ವದಲ್ಲಿ ಕೃಷಿ ಕ್ರಾಂತಿ ಮಾಡಿರುವ ಇಸ್ರೇಲ್ ದೇಶದ ಕೃಷಿ ಪರಿಣಿತರು ಹಾಗೂ ತಾಂತ್ರಿಕ ತಂಡದಿಂದ ರಾಜ್ಯದ ರೈತರಿಗೆ ತರಬೇತಿ.
ಮಹಿಳೆಯರ ಕಲ್ಯಾಣಕ್ಕೆ ಒತ್ತು:
ತಿಂಗಳ ಆದಾಯ 5 ಸಾವಿರ ರೂ.ಗಿಂತ ಕಡಿಮೆ ಇರುವ 24 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಯರಿಗೆ 2000 ರೂ. ಭತ್ಯೆ. ಸ್ತ್ರೀ ಸಂಘಗಳ ಸಂಪೂರ್ಣ ಸಾಲ ಮನ್ನಾ, ಗರ್ಭಿಣಿ ಬಾಣಂತಿಯರಿಗೆ 6 ತಿಂಗಳ ಕಾಲ 6 ಸಾವಿರ ರೂ. ಆರೋಗ್ಯ ಭತ್ಯೆ.
ಮಹಿಳೆಯರ ಹೆಸರಲ್ಲಿ ಆಸ್ತಿ ನೋಂದಾಯಿಸಿದರೆ ನೋಂದಣಿ ಶುಲ್ಕ ಶೇ.50 ರಿಯಾಯ್ತಿ. ಮಹಿಳಾ ಉದ್ಯಮಿಗಳಿಗೆ ಶೇ.5 ಸಬ್ಸಿಡಿ, ಶೋಷಣೆಗೊಳಗಾದ ಮಹಿಳೆಯರಿಗೆ ವಸತಿ ನಿಲಯಗಳ ನಿರ್ಮಾಣ, ಸರ್ಕಾರದಿಂದ ಹಂಚಿಕೆಯಾಗುವ ಎಲ್ಲ ಮನೆ, ನಿವೇಶನಗಳು ಮಹಿಳೆಯರ ಹೆಸರಲ್ಲಿ ನೋಂದಣಿ, ಕೌಟುಂಬಿಕ ಹಾಗೂ ಇತರೆ ಮಹಿಳಾ ದೌರ್ಜನ್ಯ ತಡೆಗೆ ಹೊಸ ಕಾನೂನು ರಚನೆ ಮಾಡಲಾಗುವುದು.
ಭೂ ರಹಿತ ಕುಟುಂಬದ ಮಹಿಳೆಯರಿಗೆ ನಿಶ್ಚಿತ ಆದಾಯ ಗಳಿಸಲು 10 ಸಾವಿರ ರೂ. ಪೆÇ್ರೀ ಧನ, 65 ವರ್ಷಕ್ಕೂ ಮಿಗಿಲಾದ ಹಿರಿಯ ನಾಗರಿಕರಿಗೆ 6 ಸಾವಿರ ರೂ.ಗಳ ಮಾಸಾಶನ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 8000 ರೂ. ಮಾಸಾಶನ, ಸೇವೆ ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸೇವಾ ಹಕ್ಕು ಕಾಯ್ದೆ ಜಾರಿ ಮಾಡಲಾಗುತ್ತದೆ.
ವಕೀಲರ ಸಂಘಕ್ಕೆ 100 ಕೋಟಿ ಅನುದಾನ:
ನ್ಯಾಯಯುತ ಆಡಳಿತ ನಡೆಸುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ಎಫ್ ಐಆರ್ ಪದ್ಧತಿ ಜಾರಿ. ನಿವೃತ್ತರ ನೇಮಕಾತಿ ರದ್ದು , ವಕೀಲರ ಸಂಘಕ್ಕೆ 100 ಕೋಟಿ ಅನುದಾನ, ವಕೀಲರಿಗೆ 5 ಸಾವಿರ ರೂ. ಸ್ಟೈಫೆಂಡ್ ನೀಡಲಾಗುವುದು.
ಲೋಕಾಯುಕ್ತಪ್ರಬಲ-ಎಸಿಬಿ ರದ್ದು:
ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಿ ಎಸಿಬಿಯನ್ನು ರದ್ದು ಮಾಡುವುದು ನಮ್ಮ ಉದ್ದೇಶವಾಗಿದೆ. ನಾಗರಿಕರ ಮಾಹಿತಿ ಗೌಪ್ಯತೆ ಕಾಪಾಡುವುದು, ನಿರಪರಾಧಿಗಳಿಗೆ ರಕ್ಷಣೆ ನೀಡುವುದು, ಲೋಕಾಯುಕ್ತಕ್ಕೆ ಪ್ರತ್ಯೇಕ ಪೆÇಲೀಸ್ ವ್ಯವಸ್ಥೆ ಮಾಡುವುದನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಭೂ ಕಬಳಿಕೆದಾರರ ವಿರುದ್ಧ ಪ್ರಬಲ ಅಸ್ತ್ರ ಪ್ರಯೋಗಿಸುವ ಯೋಜನೆಗಳನ್ನು ಜೆಡಿಎಸ್ ಪ್ರಣಾಳಿಕೆಯಲ್ಲಿ ಅಳವಡಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಅನಗತ್ಯ ಭೂ ವ್ಯಾಜ್ಯಗಳಿಗೆ ಕಡಿವಾಣ ಹಾಕಲು ಸೂಕ್ತ ಕಾಯ್ದೆ ತರಲಿದೆ. ಭೂಮಿ ಮಾರಾಟವಾದ ನಂತರ ಮಾರಾಟಗಾರನ ಮತ್ತು ವಾರಸುದಾರನಿಂದ ಭೂ ವಿವಾದ ಎದುರಾದರೆ ಮಾರಾಟ ಮಾಡಿದವರ ವಿರುದ್ಧ ಕೇಸ್ ದಾಖಲಿಸುವ ಶಾಸನ ಜಾರಿಗೆ ತರಲು ನಿರ್ಧರಿಸಲಾಗಿದೆ.
ಸಬ್ರಿಜಿಸ್ಟ್ರರ್ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟಲು ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ನೋಂದಣಿ ಕೇಂದ್ರ ಸ್ಥಾಪಿಸಲು ನಿರ್ಧಾರ. ರಾಜ್ಯದಲ್ಲಿ ಸರ್ಕಾರಿ ಭೂ ಕಬಳಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ. ಪ್ರಕರಣಗಳ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯಾಲಯ ರಚನೆ, ಐಎಎಸ್, ಐಪಿಎಸ್,ಐಎಫ್ಎಸ್ ಕೆಎಎಸ್ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪರಾಮರ್ಶಿಸಲು ವಾರ್ಷಿಕ ಪರೀಕ್ಷೆ ನಡೆಸುವುದು, ವೇತನ ಹೆಚ್ಚಳಕ್ಕೆ ಈ ಪರೀಕ್ಷೆ ಮಾನದಂಡವಾಗಲಿದೆ. ವೆಬ್ಸೈಟ್ನಲ್ಲಿ ಅಧಿಕಾರಿಗಳ ಆಸ್ತಿ ಘೋಷಣೆ ಪ್ರಕಟ.
ವಾಣಿಜ್ಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪೆÇ್ರೀ ನಂದಿನಿ ಬ್ರ್ಯಾಂಡ್ ಮಾದರಿಯಲ್ಲಿ ಎಣ್ಣೆಕಾಳುಗಳ ಬೆಳೆಗೆ ಪೆÇ್ರೀ ಬೆಳೆ ಉತ್ಪನ್ನ ಸಂರಕ್ಷಣೆಗೆ ಒತ್ತು, ಧಾನ್ಯಗಳಿಗೆ ಪೆÇ್ರೀ ಶೇ.100ರಷ್ಟು ಸಬ್ಸಿಡಿ, ಯಂತ್ರ ಖರೀದಿಗೆ ಶೇ.75ರಷ್ಟು ಪೆÇ್ರೀ ನೀಡಲಾಗುವುದು.
ಕೃಷಿ ಪಂಪ್ಸೆಟ್ಗಳ ವಿದ್ಯುತ್ ಬೇಡಿಕೆ ಪೂರೈಕೆ, ಬೀಜಗಳ ಸಬ್ಸಿಡಿ ಹೆಚ್ಚಳ ಮಾಡಲಾಗುವುದು.
ಡೊನೇಷನ್ ಹಾವಳಿಗೆ ಕಡಿವಾಣ:
ಸರ್ಕಾರಿ ಶಾಲೆಗಳ ಬಲವರ್ಧನೆ, ರಾಜ್ಯ ಪಠ್ಯಕ್ರಮಗಳಿಗೆ ಬೆಂಬಲ, ಅನಗತ್ಯ ಶುಲ್ಕಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಜಾರಿ, 8ನೇ ತರಗತಿಯಿಂದ ಕೌಶಲ್ಯ ಅಭಿವೃದ್ದಿಗೆ ಒತ್ತು , ಸ್ನಾತಕೋತ್ತರದವರೆಗೆ ಉಚಿತ ಶಿಕ್ಷಣ, ಸಿಇಟಿ ರ್ಯಾಂಕಿಂಗ್ನಲ್ಲೂ ಕನ್ನಡ ಪರಿಗಣನೆಗೆ ಒತ್ತು ನೀಡಲಾಗುತ್ತದೆ.
ಆರೋಗ್ಯ ಸೇವೆ ನೀಡಲು ವೈದ್ಯರ ನೆಟ್ವರ್ಕ್, ಮನೆಬಾಗಿಲಿಗೆ ಜನರಿಕ್ ಔಷಧಿ, ಹೊಸ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ, ಬಯಲು ಸೀಮೆಗೆ 60 ಟಿಎಂಸಿ ನೀರು, ನೀರಾವರಿ ಕ್ಷೇತ್ರಕ್ಕೆ 1,50,000 ಕೋಟಿ ಹೂಡಿಕೆ. ಕಾವೇರಿ ನದಿಯಿಂದ ಹೆಚ್ಚುವರಿ 15 ಟಿಎಂಸಿ ನೀರು ಬಳಕೆ ಯೋಜನೆ ಕಲ್ಬುರ್ಗಿಯಲ್ಲಿ ಸೌರ ಶಕ್ತಿ ಕೈಗಾರಿಕೆ ಅಭಿವೃದ್ದಿ ಕೇಂದ್ರ ಸ್ಥಾಪನೆ, ಚಾಮರಾಜನಗರ ಜಿಲ್ಲೆಯಲ್ಲಿ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಅಭಿವೃದ್ದಿ ಕೇಂದ್ರ ಸ್ಥಾಪನೆ, ರಾಮನಗರದಲ್ಲಿ ಚಿತ್ರ ನಿರ್ಮಾಣ ಕೇಂದ್ರ, ವಿದ್ಯುತ್ ಸ್ವಾವಲಂಬಿ ಕರ್ನಾಟಕ ಗುರಿ ಹೊಂದಿದ್ದು , 2020ರ ಹೊತ್ತಿಗೆ ವಿದ್ಯುತ್ ಸಂಪನ್ಮೂಲ ರಾಜ್ಯವನ್ನಾಗಿಸುವ ಗುರಿಯನ್ನು ಜೆಡಿಎಸ್ ಹೊಂದಿದೆ. ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗಳನ್ನು ರೂಪಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.