ಬೆಂಗಳೂರು, ಮೇ 7-ಕಾಂಗ್ರೆಸ್ ಜೊತೆಯೂ ಇಲ್ಲ, ಬಿಜೆಪಿ ಜೊತೆಯೂ ಇಲ್ಲ. ರಾಜ್ಯದ ಆರೂವರೆ ಕೋಟಿ ಜನರು ಜೊತೆ ಇದ್ದು, ತಾವು ಮುಖ್ಯಮಂತ್ರಿಯಾಗಲು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಜೆ.ಪಿ.ಭವನದಲ್ಲಿಂದು 2018ರ ವಿಧಾನಸಭೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ 113 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅವಕಾಶವಾದಿಗಳಾಗಿವೆ ಎಂದು ಹೇಳಿದರು.
ಚುನಾವಣಾ ಪೂರ್ವ ಸಮೀಕ್ಷೆಗಳಂತೆ ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೆ ನಮ್ಮ ಪ್ರಣಾಳಿಕೆಯ ಅಂಶಗಳನ್ನು ಅನುಷ್ಠಾನಗೊಳಿಸುವವರಿಗೆ ಬೆಂಬಲ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅಪ್ಪನಾಣೆಗೂ ಅವರು ಶಾಸಕರಾಗುವುದಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಎರಡೂ ಪಕ್ಷಗಳು ಲೂಟಿಕೋರರಿಗೆ ದೊಡ್ಡ ಮಟ್ಟದಲ್ಲಿ ರಕ್ಷಣೆ ಕೊಡುತ್ತಿವೆ. ಕಾನೂನು ರೀತಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ನವರು ನಿತ್ಯವು ಬಿಜೆಪಿ ಬಿ ಟೀಮ್ ಎಂದು ಜೆಡಿಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಪರ್ಸೆಂಟೇಜ್ ಪ್ರಾರಂಭವಾಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾಮಗಾರಿಯ ಆದೇಶ, ಟೆಂಡರ್, ಅವಾರ್ಡ್, ಹಣ ಪಾವತಿ ಸೇರಿದಂತೆ ಎಲ್ಲಾ ಹಂತದಲ್ಲೂ ಪರ್ಸೆಂಟೇಜ್ ವ್ಯವಸ್ಥೆಯನ್ನು ಕಾಂಗ್ರೆಸ್ನವರಿಗೆ ಹೇಳಿಕೊಟ್ಟವರೇ ಬಿಜೆಪಿಯವರು, ಅವರು ಚೆಕ್ನಲ್ಲಿ ತೆಗೆದುಕೊಂಡರೆ, ಇವರು ಕ್ಯಾಷ್ನಲ್ಲಿ ತೆಗೆದುಕೊಂಡಿದ್ದಾರಷ್ಟೇ. ಜೆಡಿಎಸ್ ಪ್ರಣಾಳಿಕೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನೀಲನಕ್ಷೆ ಸಿದ್ದಪಡಿಸಿದ್ದು, ಇವರೇನು ಸಾಲ ಮಾಡಿ ಅನುಷ್ಠಾನಗೊಳಿಸುವುದಿಲ್ಲ. ರಾಜ್ಯದ ಜನರು ನೀಡುವ ತೆರಿಗೆ ಹಣದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.
ಬಿಜೆಪಿ ಸರ್ಕಾರ 83 ಸಾವಿರ ಕೋಟಿ ರೂ. ಸಾಲ ಮಾಡಿದ್ದರೆ, ಕಾಂಗ್ರೆಸ್ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿನ ಭ್ರಷ್ಟಾಚಾರವನ್ನು ಮೊದಲು ಸ್ವಚ್ಛಗೊಳಿಸಲಾಗುವುದು.
ಲೋಕಾಯುಕ್ತ ಸಂಸ್ಥೆಯನ್ನು ರಾಷ್ಟ್ರೀಯ ಪಕ್ಷಗಳೆರಡು ಕತ್ತು ಹಿಸುಕಿದ್ದು ಅದಕ್ಕೆ ಪುನಶ್ಚೇತನ ನೀಡಲಾಗುವುದು ಎಂದರು.
ಎರಡೂ ರಾಷ್ಟ್ರೀಯ ಪಕ್ಷಗಳು ನೀಡಿರುವ ಪ್ರಣಾಳಿಕೆಗಳಿಗಿಂತ ನಮ್ಮ ಪಕ್ಷದ ಪ್ರಣಾಳಿಕೆ ಭಿನ್ನವಾಗಿದ್ದು, ಸಾಮಾಜಿಕ ನ್ಯಾಯ, ವಿದ್ಯುತ್, ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿದ್ದು, ಉದ್ಯೋಗ ಸೃಷ್ಟಿಗೂ ಅವಕಾಶ ಕಲ್ಪಿಸಲಾಗಿದೆ. ಜನರು ನೀಡಿದ ಸಲಹೆಗಳನ್ನೂ ಕೂಡ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ರಮೇಶ್ಬಾಬು, ಚೌಡರೆಡ್ಡಿ,ಕೇರಳ ಸಚಿವ ಮ್ಯಾಥ್ಯೂ ಥಾಮಸ್, ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನಕಾರ್ಯದರ್ಶಿ ಬಿ.ಎಂ.ಫಾರೂಕ್, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಜೆಡಿಎಸ್ ಅಭ್ಯರ್ಥಿಗಳಾದ ಶ್ರೀಧರ್ರೆಡ್ಡಿ, ಹೇಮಚಂದ್ರಸಾಗರ್ ಉಪಸ್ಥಿತರಿದ್ದರು.