ಬೆಂಗಳೂರು , ಮೇ.5 : ರೈತರು, ಚಾಲಕರು, ಮಾಣಿಗಳುರಂತಹ ಜನಸಾಮಾನ್ಯರು ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಶುದ್ಧ ಆಡಳಿತ ನಡೆಸಲು ಜನತೆ ಎಂಇಪಿ ಪಕ್ಷಕ್ಕೆ ಆಶೀರ್ವಾದ ನೀಡಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಮನವಿ ಮಾಡಿದ್ದಾರೆ.
ಗಾಂಧಿನಗರ ಹಾಗೂ ಶಿವಾಜಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಶನಿವಾರ ನಡೆದ ತಾರಾ ಪ್ರಚಾರಕರ ರೋಡ್ ಶೋ ಹಾಗೂ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜಕೀಯ ಮತ್ತು ಆಡಳಿತ ಎಂಬುವುದು ಕೆಲವೇ ಕೆಲವರ ಸ್ವತ್ತಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಮಹಿಳೆಯರಿಗೆ ಗೌರವ ಮತ್ತು ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕು ಇನ್ನೂ ಸಿಕ್ಕಿಲ್ಲ ಎಂದು ವಿಷಾದಿಸಿದರು. ಬೆಂಗಳೂರಿನ ಜನತೆ ನೀರು, ವಿದ್ಯುತ್ , ಸಂಚಾರ ದಟ್ಟಣೆಯಂತಹ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಂಇಪಿ ಅಧಿಕಾರಕ್ಕೆ ಬಂದರೆ ಬೆಂಗಳೂರು ಮಹಾನಗರವನ್ನು ವಿಶ್ವದರ್ಜೆಯ ಮಟ್ಟಕ್ಕೆ ಏರಿಸಿ ಎಲ್ಲ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಎಂದರು.
ಬೆಂಗಳೂರಿನ ಬಗ್ಗೆ ನನಗೆ ವಿಭಿನ್ನ ಕಲ್ಪನೆಗಳು ಇದ್ದವು. ಆದರೆ, ನೀರು, ವಿದ್ಯುತ್, ಕಸದ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಸೇರಿದಂತೆ ಇಲ್ಲಿನ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿದರೆ ಇಲ್ಲಿನ ಆಡಳಿತ ಹೇಗಿದೆ ಎಂಬುದು ಮುಖಕ್ಕೆ ಹಿಡಿದ ಕನ್ನಡಿಯಂತಿದೆ. ಬೆಂಗಳೂರು ಮಹಾನಗರವನ್ನು ವಿಶ್ವದರ್ಜೆಯ ಮೂಲಸೌಲಭ್ಯಗಳ ನಗರವನ್ನಾಗಿ ಮಾಡಲು ನಮ್ಮ ಪಕ್ಷ ಬದ್ದವಾಗಿದೆ ಎಂದು ಹೇಳಿದರು.
ಎಂಇಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ರಿಯಲ್ ಎಸ್ಟೇಟ್ ಕುಳಗಳು ಇಲ್ಲ. ಭೂಮಿ ನುಂಗಿದ ಖದೀಮರಿಲ್ಲ. ಬದಲಾಗಿ ರೈತರು, ಚಾಲಕರಂತರ ಶ್ರೀಸಾಮಾನ್ಯರೇ ಇದ್ದಾರೆ ಎಂದರು. ಸಮಾಜದ ಸರ್ವಜನಾಂಗದವರು ಮೆಚ್ಚುವಂತಹ ಆಡಳಿತ ನೀಡಲು ಎಂಇಪಿ ಬದ್ಧವಾಗಿದೆ. ಜಾತಿ, ಮತಗಳ ನಡುವೆ ಜಗಳ ಹಚ್ಚುವ ಬದಲು ಎಲ್ಲರಿಗೂ ಸಮಾನ ನ್ಯಾಯ ದೊರೆಯಲಿದೆ ಎಂದು ತಿಳಿಸಿದರು.
ಬಾಲಿವುಡ್ರ ಉತ್ಸಾಹ
ಡಾ.ನೌಹೀರಾ ಶೇಕ್ ಅವರೊಂದಿಗೆ ಬಾಲಿವುಡ್ ನಟರಾದ ಅರ್ಬಾಜ್ ಖಾನ್, ಸೋನಿ ಸೂದ್,ಸುಹೇಲ್ ಖಾನ್ ಮತ್ತಿತರ ತಾರಾ ಪ್ರಚಾರಕರಿದ್ದ ರೋಡ್ ಶೋ ರ್ಯಾಲಿ ತೆರಳಿದ ಮಾರ್ಗದ ಉದ್ದಕ್ಕೂ ಪಕ್ಷದ ಕಾರ್ಯಕರ್ತರ ಉತ್ಸಾಹ ಮೆರೆ ಮೀರಿತ್ತು. ದಾರಿ ಉದ್ದಕ್ಕೂ ಜನರು ಎಂಇಪಿ ರ್ಯಾಲಿಯನ್ನು ಅತ್ಯಂತ ಬೆರಗುಗಣ್ಣುಗಳಿಂದ ನೋಡಿ ಅಮೀತೋತ್ಸಾಹ ತೋರುತ್ತಿದ್ದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಅವರಿಗೆ ಅಲ್ಲಲ್ಲಿ ಜನರು ಹೂಗುಚ್ಚ ನೀಡಿ, ಪಟಾಕಿ ಸಿಡಿಸಿ ಅಭೂತಪೂರ್ವ ಸ್ವಾಗತ ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ಎಲ್ಲೆಡೆ ಎಂಇಪಿಗೆ ಅಧಿಕಾರ ನೀಡಿ ಮನೆಮನೆ ಬೆಳಗಿ ಘೋಷನೆಗಳು ಮುಗಿಲು ಮುಟ್ಟಿದ್ದವು.