ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಬೇಸತ್ತಿರುವ ಪದ್ಮನಾಭನಗರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್‍ಗೆ ಮತ ನೀಡಲಿದ್ದಾರೆ: ಕಾಂಗ್ರೆಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ವಿಶ್ವಾಸ

ಬೆಂಗಳೂರು, ಮೇ 5- ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಬೇಸತ್ತಿರುವ ಪದ್ಮನಾಭನಗರದ ಪ್ರಜ್ಞಾವಂತ ಮತದಾರರು ಈ ಬಾರಿ ಕಾಂಗ್ರೆಸ್‍ಗೆ ಮತ ನೀಡಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಸದಸ್ಯೆ ಜ್ಯೋತಿ ಹರಿರೆಡ್ಡಿ , ಮಾಜಿ ಸದಸ್ಯರಾದ ವೆಂಕಟೇಶ್‍ಬಾಬು, ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ, ಕಾಂಗ್ರೆಸ್ ಮುಖಂಡರಾದ ಚೇತನ್‍ಗೌಡ, ಹರಿರೆಡ್ಡಿ ಮತ್ತಿತರರೊಂದಿಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮತಯಾಚಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೋಟು ಅಮಾನೀಕರಣ, ಜಿಎಸ್‍ಟಿ ಜಾರಿಯಂತಹ ಜನವಿರೋಧಿ ನೀತಿಯನ್ನು ವಿರೋಧಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದು, ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದರು.

ಕ್ಷೇತ್ರದ ವಿವಿಧೆಡೆ ಮತ ಪ್ರಚಾರ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರ ಒಲವು ಕಂಡುಬರುತ್ತಿದೆ. ದೀನ ದಲಿತರು, ಕಡು ಬಡವರು, ಅಲ್ಪ ಸಂಖ್ಯಾತರು, ಜೈನ ಸಮುದಾಯದವರು ಈ ಬಾರಿ ಕೈ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ರೀನಿವಾಸ್ ಹೇಳಿದರು.

ಬಿಜೆಪಿ ಪಕ್ಷದಲ್ಲಿನ ಭಿನ್ನಮತ ಹಾಗೂ ಆ ಪಕ್ಷದ ಅಭ್ಯರ್ಥಿ ವಿರುದ್ಧದ ಅಸಮಾಧಾನ ನಮಗೆ ವರದಾನವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಭಾಗದ ಕಾಂಗ್ರೆಸ್ ಮತಗಳು ಹಾಗೂ ನನ್ನ ವೈಯಕ್ತಿಕ ವರ್ಚಸ್ಸಿನ ಆಧಾರವೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ