ಹಾದಿ ತಪ್ಪಿಸುವ ಚುನಾವಣಾ ಪ್ರಚಾರದ ಜಾಹೀರಾತುಗಳನ್ನು ಪ್ರಕÀಟಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದಿಂದ ಕಟ್ಟುನಿಟ್ಟಿನ ನಿರ್ಬಂಧ

ಬೆಂಗಳೂರು, ಮೇ 5-ಮುದ್ರಣ ಮಾಧ್ಯಮಗಳಲ್ಲಿ (ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು) ಪರಸ್ಪರ ಅರೋಪ-ಪ್ರತ್ಯಾರೋಪ ಹಾಗೂ ಹಾದಿ ತಪ್ಪಿಸುವ ಚುನಾವಣಾ ಪ್ರಚಾರದ ಜಾಹೀರಾತುಗಳನ್ನು ರಾಜಕೀಯ ಪಕ್ಷಗಳು ಪ್ರಕಟಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಚುನಾವಣಾ ಆಯೋಗ ಕೆಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ.

ಚುನಾವಣೆ ಹಿಂದಿನ ದಿನ (ಮೇ 11) ಮತ್ತು ಮತದಾನವಾಗುವ ದಿನ (ಮೇ 12) ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಅಥವಾ ಇತರ ಸಂಘಟನೆಗಳು ಅಥವಾ ವ್ಯಕ್ತಿಗಳು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸದಂತೆ ಆಯೋಗ ಸ್ಪಷ್ಟ ನಿರ್ದೇಶನ ನೀಡಿ ಕೆಲವು ಷರತ್ತುಗಳನ್ನು ವಿಧಿಸಿದೆ.

ಚುನಾವಣಾ ಪ್ರಚಾರ ಜಾಹೀರಾತುಗಳನ್ನು ಆ ದಿನ ಪ್ರಕಟಿಸಬೇಕಾದರೆ, ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಇಲ್ಲವೇ ಸಂಬಂಧಪಟ್ಟವರು ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಇರುವ ಎಂಸಿಎಂಸಿ ಸಮಿತಿಯಿಂದ ಉದ್ದೇಶಿತ ಜಾಹೀರಾತಿನ ಸಾರಾಂಶಗಳನ್ನು ಪರಿಶೀಲನೆಗೆ ಒಳಪಡಿಸಿ ಪೂರ್ವ ದೃಢೀಕರಣ ಪಡೆಯಬೇಕು ಎಂದು ಆಯೋಗ ತಿಳಿಸಿದೆ.
ಇಂಥ ಜಾಹೀರಾತುಗಳ ಸಾರಾಂಶಗಳನ್ನು ಅವಲೋಕಿಸಿ, ಪರಾಮರ್ಶಿಸಿದ ನಂತರ ಸಮಿತಿಯು ತ್ವರಿತ ದೃಢೀಕರಣ ನೀಡಬೇಕೆಂದೂ ಆಯೋಗ ಸಲಹೆ ಮಾಡಿದೆ.

ಚುನಾವಣಾ ಪ್ರಕ್ರಿಯೆ ಕೊನೆ ಹಂತದಲ್ಲಿರುವ ಸಂದರ್ಭದಲ್ಲಿ ಇಂಥ ಜಾಹೀರಾತುಗಳು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಉಮೇದುವಾರರ/ಪಕ್ಷಗಳು ಇಂಥ ಪ್ರಕರಣಗಳಲ್ಲಿ ಸ್ಪಷ್ಟೀಕರಣ ಅಥವಾ ನಿರಾಕರಣೆ ನೀಡಲು ಸಮಯಾವಕಾಶ ಲಭಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳು ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅವರಿಗೆ ಸೂಚನೆ ನೀಡಿದೆ.
ಈ ಬಗ್ಗೆ ಕೂಡಲೇ ಎಲ್ಲ ರಾಜಕೀಯ ಪಕ್ಷಗಳು ಅಧ್ಯಕ್ಷರು, ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಮುದ್ರಣ ಮಾಧ್ಯಮಗಳಿಗೆ ತಿಳಿಸುವಂತೆಯೂ ಸೂಚನೆ ನೀಡಿರುವುದಾಗಿ ಆಯೋಗದ ಕಾರ್ಯದರ್ಶಿ ಅಜಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ