ಸಿ-ಕಾಂಗ್ರೆಸ್-ಸಿ-ಕರಪ್ಷನ್: ಎರಡಕ್ಕೂ ಅಂತರ ಕಡಿಮೆಯಿದೆ: ಪ್ರಧಾನಿ ಮೋದಿ ವ್ಯಾಖ್ಯಾನ

ಶಿವಮೊಗ್ಗ:ಮೇ-5: ಕಾಂಗ್ರೆಸ್ ಪದ ಸಿ ಇಂದ ಆರಂಭವಾಗುತ್ತದೆ, ಕರಪ್ಷನ್ ಸಹ ಸಿ ಇಂದ ಆರಂಭವಾಗುತ್ತದೆ.. ಇದರೊಂದಿಗೆ ಎರಡೂ ಪದಗಳ ನಡುವಿನ ಅಂತರವೂ ಸಹ ಕಡಿಮೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಮಲೆನಾಡಿನ ಹೆಬ್ಬಾಗಿಲು, ಶಿವಮೊಗ್ಗದ ಜನತೆಗೆ ನಮಸ್ಕಾರಗಳು, ಕದಂಬ, ಕೆಳದಿ ಅರಸರ ನಾಡು, ಸಂಸ್ಕೃತ ಗ್ರಾಮ ಮತ್ತೂರು, ಜೋಗ ಜಲಪಾತ ಹೊಂದಿರುವ ನಾಡಿನ ಶಿವಪ್ಪನಾಯಕ, ವೀರ ರಾಣಿ ಚೆನ್ನಮ್ಮ, ಕುವೆಂಪು, ಶಾಂತವೇರಿ ಗೋಪಾಲಗೌಡ ಸೇರಿದಂತೆ ಎಲ್ಲ ಮಹಾನ್ ಚೇತನಗಳಿಗೆ ನಾನು ವಂದಿಸುತ್ತೇನೆ ಎಂದು ಮೋದಿ ಮಾತು ಆರಂಭಿಸಿದರು.

ಶಿವಮೊಗ್ಗದೊಂದಿಗೆ ನನಗೆ ಒಂದು ರೀತಿಯ ಅನನ್ಯ ಸಂಬಂಧವಿದೆ. ನಾನು 1991ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೊರಟ ತಿರಂಗಾ ಯಾತ್ರ ಸಂದರ್ಭದಲ್ಲಿ ನಾನು ಶಿವಮೊಗ್ಗದಲ್ಲಿ ತಂಗಿದ್ದೆ ಎಂದ ಮೋದಿ, ಅಂದು ಶಿವಮೊಗ್ಗದ ಜನ ನೀಡಿದ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಮಲೆನಾಡಿನ ಹೆಬ್ಬಾಗಿಲು, ಶಿವಮೊಗ್ಗದ ಜನತೆಗೆ ನಮಸ್ಕಾರಗಳು, ಕದಂಬ, ಕೆಳದಿ ಅರಸರ ನಾಡು, ಸಂಸ್ಕೃತ ಗ್ರಾಮ ಮತ್ತೂರು, ಜೋಗ ಜಲಪಾತ ಹೊಂದಿರುವ ನಾಡಿನ ಶಿವಪ್ಪನಾಯಕ, ವೀರ ರಾಣಿ ಚೆನ್ನಮ್ಮ, ಕುವೆಂಪು, ಶಾಂತವೇರಿ ಗೋಪಾಲಗೌಡ ಸೇರಿದಂತೆ ಎಲ್ಲ ಮಹಾನ್ ಚೇತನಗಳಿಗೆ ನಾನು ವಂದಿಸುತ್ತೇನೆ ಎಂದು ಮೋದಿ ಮಾತು ಆರಂಭಿಸಿದರು.

ಏಕತಾಯಾತ್ರೆ ಸಂದರ್ಭದಲ್ಲಿ ರಚನೆಯಾದ ಕೇಸರಿ ವಾಹಿನಿಗೆ ಈಶ್ವರಪ್ಪ ಸಂಚಾಲಕರಾಗಿದ್ದರು. ನಾನು ಹಾಗೂ ಅವರು ಜೊತೆಯಾಗಿ ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ತಿರಂಗಾ ಧ್ವಜ ಹಾರಿಸಿದ್ದು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ನಾವು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಕಲ್ಪನೆಯನ್ನು ಸಾಕಾರಗೊಳಿಸಲು ನಾವು ಯತ್ನಿಸುತ್ತಿದ್ದೇವೆ. ರಾಷ್ಟ್ರಕವಿ ಕುವೆಂಪು ಅವರೂ ಸಹ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ವಿಚಾರವನ್ನು ನಮಗೆ ನೀಡಿದ್ದಾರೆ ಎಂದರು.
ಆದರೆ, ಕಾಂಗ್ರೆಸ್ ಬ್ರಿಟೀಷರ ರೀತಿಯಲ್ಲಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ದೇಶದ ಉದ್ದಗಲಕ್ಕೂ ಇಂತಹ ಕೃತ್ಯವನ್ನೇ ಮಾಡುತ್ತಿದೆ ಎಂದು ಟೀಕಿಸಿದರು.
ಅಪರಾಧಿಗಳಲ್ಲೂ ಸಹ ಜಾತಿ, ಧರ್ಮ ಹಾಗೂ ಪಂಥದ ಆಧಾರದಲ್ಲಿ ಬೇರೆ ಮಾಡುತ್ತಿದ್ದೀರಲ್ಲಾ, ಇದು ಎಷ್ಟು ಸರಿ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುತ್ತೇನೆ ಎಂದ ಮೋದಿ, ನಿರಪರಾಧಿ ಎಂದು ಘೋಷಿಸಿ, ಬಿಡುಗಡೆ ವಿಚಾರದಲ್ಲೂ ಬೇದ ಮಾಡುತ್ತಿರುವುದುದು ಎಷ್ಟು ಸರಿ ಎಂದರು.
ಬಿಜೆಪಿಯ ಹಲವಾರು ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ದ ಏನು ಕ್ರಮ ಕೈಗೊಂಡಿದ್ದೀರಿ, ಇದಕ್ಕೆಲ್ಲಾ ಯಾರು ಉತ್ತರದಾಯಿ. ಕೋಮುವಾದ ಎಬಿಸಿಯಿಂದ ಮೊದಲ್ಗೊಂಡು ಬಿತ್ತುತ್ತಿರುವ ಸಿಮಿ, ಪಿಎಫ್‌ಐ ಸೇರಿದಂತೆ ಹಲವಾರು ಸಂಘಟನೆಗಳು ಇಂತಹ ಕೃತ್ಯದಲ್ಲಿ ತೊಡಗಿವೆಯಲ್ಲಾ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ್ ಜಲಪಾತ ವಿಶ್ವವಿಖ್ಯಾತ. ಇದಕ್ಕೆ ನಮಗೆ ಹೆಮ್ಮೆಯಾಗುತ್ತದೆ. ಆದರೆ, ಇದಕ್ಕೂ ಮುಖ್ಯಮಂತ್ರಿಗಳು ಕಟ್ಟುವ ವಾಚ್‌ಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಇದನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ ಎಂದರು.ಕಾಂಗ್ರೆಸ್ ಲೆಕ್ಕ ಇಟ್ಟಿಲ್ಲ, ಲೆಕ್ಕ ಬರೆದಿಲ್ಲ, ಬದಲಾಗಿ ಕೇವಲ ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ ಎಂದು ಟೀಕಿಸಿದರು.ಮರಳು ಮಾಫಿಯಾ ಯಾರದ್ದು, ಇದನ್ನು ಸಾಕುತ್ತಿರುವವರು ಯಾರು, ಇದನ್ನು ಅಪ್ಪಿಕೊಂಡಿರುವವರು ಯಾರು, ಇದರ ಹಿಂದೆ ನಿಂತಿರುವವರು ಯಾರು ಎಂಬ ಪ್ರಶ್ನೆಯನ್ನು ಕಾಂಗ್ರೆಸ್‌ನವರು ವೋಟ್ ಕೇಳಲು ಬಂದಾಗ ಪ್ರಶ್ನಿಸಿ ಎಂದರು.

ನೋಟು ಅಮಾನ್ಯೀಕರಣ ಮಾಡಿದ ನಂತರ ದೇಶವನ್ನು ಮೋದಿ ಸಂಕಷ್ಟಕ್ಕೆ ತಳ್ಳಿದರು ಎಂದು ಆರೋಪಿಸುತ್ತಾರೆ. ಆದರೆ, ನೋಟು ಅಮಾನ್ಯೀಕರಣ ಮಾಡಿದ ನಂತರ ಯಾವ ಯಾವ ಶ್ರೀಮಂತರ ಮನೆಯಲ್ಲಿ ಎಷ್ಟು ಕಪ್ಪು ಹಣವಿತ್ತು ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಅವರ ತಿಜೋರಿಯಲ್ಲಿ ಇಟ್ಟು ದುಡ್ಡನ್ನು ಕಾಂಗ್ರೆಸ್‌ನವರು ಬ್ಯಾಂಕ್‌ಗೆ ಜಮಾ ಮಾಡಿದ್ದಾರೆ. ಇಂತಹವರ ನಿಮಗೆ ಒಳ್ಳೆಯದನ್ನು ಮಾಡುತ್ತಾರಾ ಎಂದು ಪ್ರಶ್ನಿಸಿದರು.
ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರು ಐದು ವರ್ಷಗಳ ಹಿಂದೆ ಇದ್ದ ಆಸ್ತಿಗಿಂತಲೂ ಈಗ 800 ಕೋಟಿ ಹೆಚ್ಚಾಗಿದೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

2008ರಲ್ಲಿ 75 ಕೋಟಿಯಿತ್ತು, 2013ರಲ್ಲಿ 250 ಕೋಟಿ ಆಯಿತು, 2018ರಲ್ಲಿ ನಾಮಿನೇಶನ್ ಮಾಡುವ ವೇಳೆ 800 ಕೋಟಿ ಆಗಿದೆ ಕಾಂಗ್ರೆಸ್ ಸಚಿವರೊಬ್ಬರ ಆಸ್ತಿ. ಇಷ್ಟೆಲ್ಲಾ ಆಸ್ತಿ ಎಲ್ಲಿಂದ ಬಂದಿದೆ ಎಂದು ಜನರಿಗೆ ತಿಳಿಸುತ್ತೀರಾ ಎಂದು ಪ್ರಶ್ನಿಸಿದರು.
ನೋಟಿನ ಗಂಟಿನ ಮೇಲೆ ಕುಳಿತವರೂ ಸಹ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಾರೆ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.

ಮೋದಿಯವರು ಎಷ್ಟೇ ಕಷ್ಟ ಪಟ್ಟರೂ ಸಹ ಕಳ್ಳರನ್ನು ವಿಧಾನಸಭೆಯೊಳಗೆ ತೆರಳಲು ನಾವು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ. ಅರೆ ಭಯ್ಯಾ.. ಅರೆ ಭಯ್ಯಾ…ನೀವು ಹೇಳುತ್ತಿದ್ದೀರಲ್ಲಾ, ನಿಮ್ಮ ನಾಯಕರ ಬಚ್ಚಲುಮನೆಯಲ್ಲಿ, ಮಂಚದ ಕೆಳಗೆ, ಹಾಸಿಗೆ ಒಳಗೆ ದುಡ್ಡು ಸಿಕ್ಕಿತಲ್ಲಾ.. ಅವರಿಗೆಲ್ಲಾ ಹಾಡು ಹೇಳಿ ನೀವೆ ಟಿಕೇಟ್ ನೀಡುತ್ತೀದ್ದೀರಲ್ಲಾ. ಅದರ ಬಗ್ಗೆ ಸ್ವಲ್ಪ ಹೇಳುತ್ತೀರಾ…ಖನಿಜವನ್ನು ಲೂಟಿ ಮಾಡಿರುವ ಜನರಿಗೆ ತುಂಬಾ ಆತ್ಮೀಯತೆ, ತುಂಬಾ ಪ್ರೀತಿ ತೋರಿಸುತ್ತಿದ್ದೀರಲ್ಲಾ, ಯಾಕೆ ಲಾರ್ಡ್ ಪ್ರೀತಿಯನ್ನು ತೋರಿಸುತ್ತಿದ್ದೀರಿ ಎಂದು ಜನರಿಗೆ ತಿಳಿಸಿ ಎಂದು ಕಾಂಗ್ರೆಸ್‌ನ್ನು ಪ್ರಶ್ನಿಸಿದರು.

ಶಿವಮೊಗ್ಗದ ಸೋದರ, ಸೋದರಿಯರೇ ತುಂಗಾ ಸ್ನಾನ, ಗಂಗಾ ಪಾನ ಎಂಬ ಮಾತಿದೆ. ಆದರೆ, ಕಾಂಗ್ರೆಸ್ ತುಂಗೆಗೂ, ಗಂಗೆಗೂ ಗೌರವ ನೀಡಲಿಲ್ಲ ಎಂದರು.ಯಡಿಯೂರಪ್ಪ ಸಿಎಂ ಆಗಿ, ಈಶ್ವರಪ್ಪ ನೀರಾವರಿ ಸಚಿವರಾದಾಗ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಆಗ ಪ್ರತಿ ವರ್ಷ ಈಶ್ವರಪ್ಪ ಗುಜರಾತ್‌ಗೆ ಬಂದು ಸಬರಮತಿ ಯೋಜನೆಯನ್ನು ಅಧ್ಯಯನ ಮಾಡಿ, ಶಿವಮೊಗ್ಗದಲ್ಲೂ ತುಂಗೆಯನ್ನು ಅದೇ ರೀತಿ ಮಾಡಬೇಕು ಎಂದು ಆಶಿಸಿದ್ದರು. ಆದರೆ, ಕಾಂಗ್ರೆಸ್ ಅದನ್ನು ಭಗ್ನ ಮಾಡಿದೆ ಎಂದರು.

ಮೇ 18ರಂದು ಕರ್ನಾಟಕದಲ್ಲಿ ನೂತನ ಸರ್ಕಾರ ಬಿಎಸ್‌ವೈ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ಬರಲಿದೆ. ಆನಂತರ ತುಂಗಾ ತಾಯಿಯ ರಿವರ್ ಫ್ರಂಟ್ ಯೋಜನೆಯನ್ನು ಖಚಿತವಾಗಿ ಕೈಗೆತ್ತಿಕೊಳ್ಳುವ ಭರವಸೆಯನ್ನು ನಾನು ನೀಡುತ್ತೇನೆ ಎಂದು ಮೋದಿ ತಿಳಿಸಿದರು.
ಪ್ರಧಾನಿಯವರು ಈ ದೇಶದಲ್ಲಿ ಶೌಚಾಲಯದ ಬಗ್ಗೆ ಮಾತನಾಡಿದರೆ, ಕೆಂಪುಕೋಟೆ ಮೇಲೆ ನಿಂತು ಕಸ ಗುಡಿಸುತ್ತಾರೆ, ಶೌಚಾಲಯ ಕಟ್ಟುತ್ತಾರಾ ಎಂದು ಪ್ರಧಾನಿಯವರನ್ನೇ ಕೀಟಲೆ ಮಾಡಿ, ಅಪಹಾಸ್ಯ ಮಾಡುತ್ತಾರೆ. ಬಯಲಿನಲ್ಲಿ ಶೌಚಾಲಯಕ್ಕೆ ಹೋಗುವ ಮಹಿಳೆಯರ, ಅಕ್ಕತಂಗಿಯರ ನೋವು ನಮಗೆ ಗೊತ್ತು. ಬಯಲಿನಲ್ಲಿ ಶೌಚಕ್ಕೆ ಹೋಗಲು ಕತ್ತಲಾಗುವುದನ್ನು ಮಹಿಳೆಯರು ಕಾಯುತ್ತಾರೆ ಎಂದರೆ ಅವರ ಕಷ್ಟ ಗೊತ್ತಾಗುತ್ತದೆ. ಇಂತಹ ವಿಚಾರವನ್ನು ಕಾಂಗ್ರೆಸ್ ಅಪಹಾಸ್ಯ ಮಾಡುತ್ತದೆ ಎಂದರು.

ಸೋದರ, ಸೋದರಿಯರೇ ಯಾವುದೇ ಸಮಸ್ಯೆಗೆ ಕಾಂಗ್ರೆಸ್ ಬಳಿ ಪರಿಹಾರವಿಲ್ಲ. ಇದು ಅಡಕೆ ನಾಡು. ಯುಪಿಎ ಸರ್ಕಾರ ಅಡಕೆ ಹಾನಿಕಾರ ಎಂಬ ಅಫಿಡವಿಟ್ ಸಲ್ಲಿಸಿತ್ತು ಎನ್ನುವುದನ್ನು ಅರಿಯಿತು. ದೇಶದ ಅರ್ಧಭಾಗದ ಅಡಕೆಯನ್ನು ಇಲ್ಲಿ ಬೆಳೆಯುತ್ತಾರೆ. ಒಂದು ವೇಳೆ ಅಡಕೆಗೆ ತೊಂದರೆಯಾದರೆ, ಮಲೆನಾಡಿಗರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿರಿ. ಹೀಗಾಗಿ, ಯಡಿಯೂರಪ್ಪಜಿ ಅಡಕೆ ಬೆಳಗಾರರ ಪರವಾಗಿ ಹೋರಾಟ ಮಾಡಿದ್ದಾರೆ. ನಮ್ಮ ಸರ್ಕಾರ ಬಂದಾಗ ಅಡಕೆ ಬೆಳೆಗಾರರ ಸಂಕಷ್ಟ ದೂರ ಮಾಡಲು ರಾಜ್ಯದಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದರು.
ಶಿವಮೊಗ್ಗ ಸಣ್ಣ ಸಣ್ಣ ಕೈಗಾರಿಕೆಗಳ ಬೀಡಾಗಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದಕ್ಕೆಲ್ಲಾ ವಿಶೇಷ ಸ್ಕಿಲ್ ಮ್ಯಾನ್ ಪವರ್ ಗೆ ಅವಕಾಶ ಕಲ್ಪಿಸುತ್ತೇವೆ ಎಂದರು.

ಕರ್ನಾಟಕ ವಿಕಾಸವಾದ ಭಾರತದ ವಿಕಾಸ, ಶಿವಮೊಗ್ಗದ ವಿಕಾಸವಾದಾಗ ಕರ್ನಾಟಕದ ವಿಕಾಸವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದರು. 30 ಸಾವಿರ ಕೋಟಿ ಮೊತ್ತದ ಹೊಸ ಯೋಜನೆಗಳನ್ನು ರೈಲ್ವೆ ಇಲಾಖೆಯಿಂದ ನಾವು ರಾಜ್ಯದಲ್ಲಿ ಮಾಡುತ್ತಿದ್ದೇವೆ. ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರು ಮಾರ್ಗವೂ ಆಗಲಿದೆ. ಇದರೊಂದಿಗೆ ಶರಾವತಿ ನದಿ ಸೇತುವೆಯೂ ಸಹ ನಮ್ಮ ಅವಧಿಯಲ್ಲೇ ಆಗುತ್ತಿದೆ ಎಂದರು.
ಮಾರ್ಚ್ 12ರಂದು ನಡೆಯುವ ಮತದಾನದಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ರಾಜ್ಯವನ್ನು ಅಭಿವೃದ್ಧಿ ಮಾಡೋಣ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ