ರಾಯಚೂರು, ಮೇ 4- ದೀಪದ ಕೆಳಗೆ ಕತ್ತಲು ಎನ್ನುವಂತೆ ವಿದ್ಯುತ್ ಉತ್ಪಾದನಾ ಜಿಲ್ಲೆಯಾದ ರಾಯಚೂರಿನ ವಿವಿಧ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಇಲ್ಲದೆ ರೈತರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.
ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೆಸಾಗೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿವೆ. ನದಿ ಮೂಲಗಳಿಂದ ಗ್ರಾಮಗಳಿಗೆ ನೀರು ನೀಡಿಲ್ಲ. ಅಲ್ಲದೆ, ರಾಜ್ಯಕ್ಕೆ ಬೆಳಕು ನೀಡುವ ವಿದ್ಯುಚ್ಛಕ್ತಿ ಕೇಂದ್ರವಾದ ರಾಯಚೂರಿನ ಕೆಲವು ಜಿಲ್ಲೆಗಳಿಗೆ ವಿದ್ಯುತ್ ನೀಡುವಲ್ಲಿ ಅನ್ಯಾಯವಾಗಿದೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರಾಷ್ಟ್ರೀಯ ಪಕ್ಷಗಳು ನೆರವಿಗೆ ಬರುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಸಾಲ ಮನ್ನಾ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.
ರಾಜ್ಯದ ಜ್ವಲಂತ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಹೊಸ ಕೃಷಿ ನೀತಿ ಜಾರಿಗೊಳಿಸಲಾಗುವುದು. ಆರೋಗ್ಯ ಸರಿ ಇಲ್ಲ. ಆದರೆ ನನ್ನ ಆರೋಗ್ಯಕ್ಕಿಂತ ರೈತರ ಅಭಿವೃದ್ಧಿಯೇ ನನ್ನ ಗುರಿ ಎಂದರು.
ಇದೇ ವೇಳೆ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ರವಿ ಪಾಟೀಲ್ ಪ್ರಚಾರ ನಡೆಸಿದರು.