ಬೆಂಗಳೂರು ಮೇ 4: ರಾಜ್ಯದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು, ಪ್ರಚೋದನೆಗೆ ಕಾರಣವಾದ ಗೂಂಡಾಗಿರಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಜನತೆ ಸಂಕಲ್ಪ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಕ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಲೀಲಾಪ್ಯಾಲೇಸ್ ಹೊಟೇಲ್ ನಲ್ಲಿ ಇಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಇಪಿ ರ್ಯಾಲಿ ಮೇಲೆ ಕಾಂಗ್ರೆಸ್ ಬೆಂಬಲಿಗರು ಎನ್ನಲಾದ ನೂರಾರು ಹೊರಗಿನ ಗೂಂಡಾಗಳು ಏಕಾಏಕಿ ಕಲ್ಲು ತೂರಾಟ ಮಾಡಿ, ಕಾರ್ಯಕರ್ತರ ಹಾಗೂ ಕೆಲವು ಖಾಸಗಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾ ಮತ್ತು ಓಬಿ ವ್ಯಾನ್ ದ್ವಂಸ ಮಾಡಿದ್ದಾರೆ. ಮನೆಯ ಮಹಡಿ ಮೇಲೆ ನಿಂತವರೂ ಕಲ್ಲು ಎಸೆದಿದ್ದಾರೆ ಎಂದರೆ ಇದು ಏನು ತೋರಿಸುತ್ತೇ? ಇದು ಪೂರ್ವ ನಿಯೋಜಿತ ಕೃತ್ಯ ಅಲ್ವೇ? ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ನಿದ್ರೆ ಮಾಡುತ್ತೇ ಎಂಬ ಮಾತನ್ನು ನಾನು ಕೇಳಿದ್ದೆ ಆದರೆ ಹಾಡಹಗಲೆ ಮಹಿಳೆಯರ ಮೇಲೆ ಕಲ್ಲು ತೂರಾಟ ಮಾಡುವ ಇಂತಹ ಕೀಳುಮಟ್ಟಕ್ಕೆ ಇಳಿಯುತ್ತೆ ಎಂದು ನಾನು ಕನಸು-ಮನಸ್ಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ ಇಡೀ ಘಟನೆಯಲ್ಲಿ ಸರ್ಕಾರ ಭಾಗಿಯಾಗಿದೆ. ಆಡಳಿತ ಯಂತ್ರ ಮತ್ತು ಪೊಲೀಸರನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ನ ಕೆಲವು ಏಜೆಂಟ್ ಗಳು ಎಷ್ಟು ವ್ಯವಸ್ಥಿತವಾಗಿ ಇದರ ಹಿಂದೆ ಇದ್ದಾರೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ ಗೆ ಜಯವಾಗಲಿ, ಎಂಇಪಿ ನಾಶವಾಗಲಿ ಎಂದು ದಾಳಿಕೋರರು ಘೋಷಣೆ ಕೂಗುತ್ತಾರೆ. ಇನ್ನೂ, ಕೆಲವರು ಬಿಜೆಪಿ ಏಜೆಂಟ್ ಗೋ ಬ್ಯಾಕ್ ಅಂತಾ ಕೂಗುತ್ತಾರೆ ಈಗಾಗಲೇ ನನಗೂ-ಬಿಜೆಪಿಗೂ ಯಾವ ಸಂಬಂಧವಿಲ್ಲ ಎಂದು ಸಾವಿರ ಬಾರಿ ಸ್ಪಷ್ಟಪಡಿಸಿದ್ದೇನೆ. ಒಂದು ವೇಳೆ ಬಿಜೆಪಿಯವರೇ ರ್ಯಾಲಿಯಿಂದ ಹೋಗುತ್ತಿದ್ದರೇ ಅವರ ಮೇಲೆ ಕಲ್ಲು ಹೊಡಿ, ಅಡ್ಡಿಪಡಿಸು, ತೊಂದರೆಕೊಡು ಎಂದು ಯಾವ ನಿಯಮ ಹೇಳುತ್ತೇ ಎಂದು ದೂರಿದರು.
ಪ್ರಜಾಪ್ರಭುತ್ವದಲ್ಲಿ ಜನ ಯಾರಿಗೆಬೇಕಾದರೂ ಮತ ಹಾಕಬಹುದು ಸಾವಿರ ವರ್ಷಗಳ ತನಕ ಕಾಂಗ್ರೆಸ್-ಬಿಜೆಪಿಗೆ ಮತ ಕೊಡುತ್ತೇವೆ ಎಂದು ಜನ ಪ್ರಮಾಣಪತ್ರ ಮಾಡಿಕೊಟ್ಟಿದಾರಾ? ಗೂಂಡಾಗಿರಿ, ಪಾಳೇಗಾರಿಕೆ ರಾಜಕಾರಣ ಕೊನೆಯಾಗಬೇಕು ಎಂಬುದೆ ನನ್ನ ಉದ್ದೇಶ.ನನ್ನ ಗುರಿ ಮುಟ್ಟುವ ತನಕ ಹೋರಾಟ ಮಾಡುತ್ತೇನೆ ರಾಜಿಪ್ರಶ್ನೆಯೇ ಇಲ್ಲ.
ನಮ್ಮ ಪಕ್ಷದ 20ಕ್ಕೂ ಹೆಚ್ಚು ಕಾರ್ಯಕರ್ತರಿಗೆ, ಮುಖಂಡರಿಗೆ, ಮಾಧ್ಯಮದ ಸಿಬ್ಬಂದಿಗೂ ಪೆಟ್ಟುಬಿದ್ದಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೂಂಡಾಗಿರಿಗೆ ಕುಮ್ಮಕ್ಕು ಕೊಡುತ್ತಿರುವ ಸರ್ಕಾರಕ್ಕೆ ನಾಚೀಕೆ ಆಗಬೇಕು ಎಂದು ವಾಗ್ದಾಳಿ ಮಾಡಿದರು.
ಎಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆಯೋ ಅದೇ ಸ್ಥಳದಿಂದ ಮತ್ತೆ ರ್ಯಾಲಿ ನಡೆಸುತ್ತೇವೆ. ಈ ಕೃತ್ಯಕ್ಕೆ ಕಾರಣರಾದ ಗೂಂಡಾಗಳನ್ನು ಕೂಡಲೇ ಬಂಧಿಸಲು ವಿಶೇಷ ತಂಡ ರಚಿಸಿ 24 ಗಂಟೆಯೊಳಗೆ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿ ಸರ್ಕಾರ ಸಾಚಾತನ ಪ್ರದರ್ಶನ ಮಾಡಬೇಕು.
ನರ್ಸ್ ಜಯಲಕ್ಷ್ಮೀ ಗುಡುಗು
ಬೀದಿಯಲ್ಲಿ ಹೋಗುವ ಹೆಣ್ಣುಮಕ್ಕಳ, ಮುಗ್ಧರ ಮೇಲೆ ಹಲ್ಲೆ ನಡೆಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೇಳಿದ್ದಾರಾ? ಸಿದ್ದರಾಮಯ್ಯ ಸರ್ಕಾರಕ್ಕೆ ನಾಚೀಕೆಯಾಗಬೇಕು, ಅವರು ಇದಕ್ಕೆ ಉತ್ತರ ಕೊಡಬೇಕು ಇಂತಹ ಬೆದರಿಕೆಗೆ ಎಂಇಪಿ ಕಾರ್ಯಕರ್ತರು, ಮುಖಂಡರು ಹೆದರುವುದಿಲ್ಲ ಎಂದು ಸವಾಲ್ ಹಾಕಿದರು.