ಬೀದರ್, ಮೇ. 4- ಬೀದರ್ ಕ್ಷೇತ್ರವನ್ನು ಬರಮುಕ್ತಗೊಳಿಸುವುದು ನನ್ನ ಗುರಿಯಾಗಿದೆ ಎಂದು ಬೀದರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಬೀದರ ನಗರದ ಹಾರೂರಗೇರಿ, ವಿದ್ಯಾನಗರ ಕಾಲೊನಿ ಸೇರಿದಂತೆ ಕ್ಷೇತ್ರದ ವಿವಿಧೆಡೆ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು. ಎರಡು ವರ್ಷದ ಹಿಂದಿನಂಥ ಬರಗಾಲದ ಸನ್ನಿವೇಶ ಭವಿಷ್ಯದಲ್ಲಿ ಮತ್ತೆಂದೂ ಎದುರಾಗದಂತೆ ಮಾಡಲು ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಈಗಾಗಲೇ ಒಂದು ಲಕ್ಷ ಸಸಿಗಳನ್ನು ನೆಡಲಾಗಿದೆ. ಪರಿಸರ ಜಾಗೃತಿ ಮೂಡಿಸುವ ದಿಸೆಯಲ್ಲಿ ಸಸಿ ನೆಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಚೆಕ್ಡ್ಯಾಂ, ಫಾರಂ ಪಾಂಡ್, ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಿ ಕ್ಷೇತ್ರವನ್ನು ಬರ ಮುಕ್ತಗೊಳಿಸುವ ಯೋಜನೆ ಹೊಂದಿದ್ದೇನೆ ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ವೈಯಕ್ತಿಕವಾಗಿ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಸಿ ನಗರದ ಜನರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಪ್ರತಿ ವರ್ಷ ಬೇಸಿಗೆಯಲ್ಲಿ ಉಲ್ಬಣಿಸುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತದಾರ ಪ್ರಭುಗಳು ನನ್ನನ್ನು ಬೆಂಬಲಿಸಬೇಕು. ಬರಮುಕ್ತ ಬೀದರ ನಿರ್ಮಾಣಕ್ಕೆ ನನಗೆ ಶಕ್ತಿ ಕೊಡಬೇಕು ಎಂದು ಮನವಿ ಮಾಡಿದರು.
ಸಮಾಜ ಸೇವೆ ನನಗೆ ರಕ್ತಗತವಾಗಿ ಬಂದಿದೆ. ಹಿಂದೆ ನನ್ನ ತಂದೆ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ನೆರಳಲ್ಲಿ ಸಮಾಜ ಸೇವೆ ಮಾಡುತ್ತ ಬಂದಿದ್ದೆ. ಅವರ ಅಗಲಿಕೆ ನಂತರವೂ ಅವರ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದ ಎಲ್ಲ ಕಡೆ ಜನ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳುತ್ತಿದ್ದಾರೆ. ನನ್ನ ಮೇಲೆ ಅತೀವ ಪ್ರೀತಿ, ವಿಶ್ವಾಸವನ್ನು ತೋರುತ್ತಿದ್ದಾರೆ. ಆಶೀರ್ವಾದ ಮಾಡಿ ಶುಭ ಹರಿಸುತ್ತಿದ್ದಾರೆ. ಮತದಾರ ಪ್ರಭುಗಳು ಈ ಬಾರಿ ನನಗೆ ಅವಕಾಶ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಬಿಜೆಪಿ ಬೀದರ ತಾಲೂಕಾ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಮುಖಂಡರಾದ ರಾಜು ಚಿದ್ರಿ, ಉಪೇಂದ್ರ ದೇಶಪಾಂಡೆ, ಹಣಮಂತ ಬುಳ್ಳಾ, ಕಲ್ಯಾಣರಾವ ಬಿರಾದಾರ ಮುಂತಾದವರು ಭಾಗವಹಿಸಿದ್ದರು.