ಬೀದರ. ಮೆ, 04. ನಗರದ ಸಂಗಮೇಶ್ವರ ಕಾಲೊನಿ, ಮೈಲೂರ, ಸಿಎಂಸಿ ಕಾಲೊನಿ, ಅಗ್ರಿಕಲ್ಚರ್ ಕಾಲೊನಿ, ಮಂಗಲಪೇಟೆ ಮತ್ತಿತರ ಕಡೆ ಪಾದಯಾತ್ರೆ ನಡೆಸಿ ಮತಯಾಚಿಸಿದ ಬೀದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರು ತಮ್ಮ ತಂದೆ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರನ್ನು ನೆನೆದು ಭಾವುಕರಾದರು.
ಶಾಸಕ, ಸಚಿವ, ಡಿಸಿಸಿ ಬ್ಯಾಂಕ್ ಹಾಗೂ ಎನ್ನೆಸ್ಸೆಸ್ಕೆ ಅಧ್ಯಕ್ಷರಾಗಿ ತಮ್ಮ ತಂದೆ ಬೀದರ ಕ್ಷೇತ್ರ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದನ್ನು ಸ್ಮರಿಸಿಕೊಂಡರು.
ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ಜನ ತಂದೆಯವರ ಜನಪರ ಕಾಳಜಿ, ಹೃದಯ ವೈಶಾಲ್ಯತೆಯನ್ನು ಕೊಂಡಾಡುತ್ತಿದ್ದಾರೆ. ನನ್ನಲ್ಲಿ ತಂದೆಯವರನ್ನು ಕಾಣುತ್ತಿದ್ದಾರೆ. ಮನೆ ಮಗನಂತೆ ಆರತಿ ಬೆಳಗಿ ಸ್ವಾಗತಿಸುತ್ತಿದ್ದಾರೆ. ಜನರ ಪ್ರೀತಿ, ವಿಶ್ವಾಸ ಕಂಡು ಹೃದಯ ತುಂಬಿ ಬರುತ್ತಿದೆ. ಅವರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ. ಉಸಿರು ಇರುವವರೆಗೂ ಜನಸೇವೆ ಮಾಡುತ್ತಲೇ ಇರುವೆ ಎಂದು ಹೇಳಿದರು.
ತಂದೆಯವರು 18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 18 ತಿಂಗಳಲ್ಲಿ ನಿರ್ಮಿಸಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ನೆರವಾಗಿದ್ದರು. ಕಬ್ಬಿಗೆ ಒಳ್ಳೆಯ ಬೆಲೆ ಕೊಟ್ಟು ರೈತರಲ್ಲಿ ಆತ್ಮವಿಶ್ವಾಸ ತುಂಬಿದ್ದರು. ಕಾರ್ಖಾನೆಯಿಂದ ಸಾವಿರಾರು ರೈತ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಬೀದರ ಡಿಸಿಸಿ ಬ್ಯಾಂಕ್ ಮೂಲಕ ಇಡೀ ಜಗತ್ತಿಗೆ ಸ್ವಸಹಾಯ ಗುಂಪುಗಳ ಕಲ್ಪನೆಯನ್ನು ಪರಿಚಯಿಸಿದ್ದರು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಸಾಲ ಕೊಟ್ಟಿದ್ದರು. 13 ಮಹಿಳೆಯರಿಂದ ಆರಂಭವಾದ ಸ್ವಸಹಾಯ ಗುಂಪುಗಳಲ್ಲಿ ಇಂದು 3.73 ಲಕ್ಷ ಸದಸ್ಯರಿದ್ದಾರೆ. ಮಹಿಳೆಯರು ಬ್ಯಾಂಕ್ಗಳಲ್ಲಿ 140 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ವಾರ್ಷಿಕ 600 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ ಎಂದು ಹೇಳಿದರು.
ಸ್ವಸಹಾಯ ಗುಂಪುಗಳಿಂದ ಜಿಲ್ಲೆಯಲ್ಲಿ ಹೊಸ ಆರ್ಥಿಕ ಕ್ರಾಂತಿಯೇ ಆಗಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ತಮ್ಮ ಮಕ್ಕಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಕೊಡಿಸುತ್ತಿದ್ದಾರೆ. ಸ್ವಂತ ಉದ್ಯೋಗ ಆರಂಭಿಸಿ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಸ್ವಸಹಾಯ ಗುಂಪುಗಳ ಅಧ್ಯಯನಕ್ಕಾಗಿ ವಿವಿಧ ದೇಶಗಳ ಪ್ರತಿನಿಧಿಗಳು ಬೀದರಿಗೆ ಬರುತ್ತಿದ್ದಾರೆ. ಸ್ವಸಹಾಯ ಗುಂಪುಗಳ ಸದಸ್ಯರ ಆರ್ಥಿಕ ಪ್ರಗತಿ ಕಂಡು ಬೆರಗುಗೊಳ್ಳುತ್ತಿದ್ದಾರೆ. ಶಾರದಾ ರುಡಸೆಟಿ ಆರಂಭಿಸಿ ನಿರುದ್ಯೋಗಿಗಳಿಗೆ ಕೌಶಲ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗೊಳಿಸಲು ಶ್ರಮಿಸುತ್ತಿರುವುದನ್ನು ಪ್ರಶಂಶಿಸುತ್ತಿದ್ದಾರೆ ಎಂದು ಹೇಳಿದರು.
ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಬೀದರಿನಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಸಹಕಾರ ಆಸ್ಪತ್ರೆಯನ್ನು ಪ್ರಾರಂಭಿಸಿದ್ದರು. ಆಸ್ಪತ್ರೆಯಿಂದ ಜಿಲ್ಲೆಯ ರೋಗಿಗಳು ಚಿಕಿತ್ಸೆಗಾಗಿ ಹೈದರಾಬಾದ್, ಸೊಲ್ಲಾಪುರ, ಬೆಂಗಳೂರಿಗೆ ಹೋಗುವುದು ತಪ್ಪಿದೆ. ತಂದೆಯವರ ಆಸೆಯಂತೆ ನಾನು ಆಸ್ಪತ್ರೆ ಅಧ್ಯಕ್ಷನಾದ ನಂತರ ಆಸ್ಪತ್ರೆಯಲ್ಲಿ 2 ಸಾವಿರ ರೂ.ಗಳಲ್ಲಿ ಸಾಮಾನ್ಯ ಹೆರಿಗೆ, 10 ಸಾವಿರ ರೂ.ಗಳಲ್ಲಿ ಸಿಸೇರಿಯನ್ ಯೋಜನೆ ಆರಂಭಿಸಿದೆ. ಇದರಿಂದ ನೂರಾರು ಬಡ ಜನರಿಗೆ ಅನುಕೂಲವಾಗಿದೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಸ್ಥಾಪಿಸಿದ್ದರಿಂದ ಸ್ಥಳೀಯವಾಗಿಯೇ ಕೈಗೆಟುಕುವ ದರದಲ್ಲಿ ವಿವಿಧ ಪರೀಕ್ಷೆ ಹಾಗೂ ವೈದ್ಯಕೀಯ ಸೇವೆ ದೊರೆಯುತ್ತಿದೆ ಎಂದು ಹೇಳಿದರು.
ತಂದೆ ಡಿಸಿಸಿ ಬ್ಯಾಂಕ್ನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಹಿರಿಯ ಸಹೋದರ ಉಮಾಕಾಂತ ನಾಗಮಾರಪಳ್ಳಿ ಅವರು ಅದನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಎರಡು ವರ್ಷದ ಹಿಂದೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಡಿಸಿಸಿ ಬ್ಯಾಂಕ್ನಿಂದ 1.52 ಲಕ್ಷ ರೈತರ ಬೆಳೆ ವಿಮೆ ಮಾಡಿಸಿದ್ದರಿಂದ ದೇಶದಲ್ಲೇ ಅತಿಹೆಚ್ಚು ಅಂದರೆ 248 ಕೋಟಿ ರೂ. ಪರಿಹಾರ ಬೀದರಿಗೆ ಸಿಕ್ಕಿದೆ. ರೈತರಿಗೆ ತಲಾ 30 ಸಾವಿರದಿಂದ 4 ಲಕ್ಷ ರೂಪಾಯಿವರೆಗೂ ಪರಿಹಾರ ದೊರೆತಿದೆ ಎಂದು ಹೇಳಿದರು.
10 ವರ್ಷದಿಂದ ನಾನು ನಿರಂತರ ಜನಸೇವೆಯಲ್ಲಿದ್ದೇನೆ. ಬೀದರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ನನ್ನನ್ನು ಬೆಂಬಲಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಕುಮಾರ ಕಾಂಗೆ, ಮುಖಂಡರಾದ ಉಪೇಂದ್ರ ದೇಶಪಾಂಡೆ, ಫರ್ನಾಂಡೀಸ್ ಹಿಪ್ಪಳಗಾಂವ, ಡಾ, ಅಮರ ಏರೋಳಕರ, ಶಶಿಕುಮಾರ ಪಾಟೀಲ ಸಂಗಮ, ರಾಜು ಹತ್ತಿ, ಶಿವಕುಮಾರ ಭಾಲ್ಕೆ, ರಾಜೇಶ(ಪಪ್ಪು), ಸಂಗಮೇಶ ಗುಮ್ಮಾ, ಕಲ್ಯಾಣರಾವ ಬಿರಾದಾರ, ಹರೀಶ ಭಾಗವಹಿಸಿದ್ದರು.