ಬೆಂಗಳೂರು, ಮೇ 4- ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಎಂಇಪಿ ಪಕ್ಷವನ್ನು ರಾಜಕೀಯವಾಗಿ ಮುಗಿಸಲು ಸರ್ಕಾರಿ ಪ್ರಾಯೋಜಕತ್ವದ ಹಿಂಸಾಚಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಜನತೆ ಸಂಕಲ್ಪ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಕ್ ಕರೆ ನೀಡಿದರು.
ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸರ್ವಜ್ಞ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಎಂಇಪಿ ರ್ಯಾಲಿ ಮೇಲೆ ಕೆಲವು ಸ್ಥಳೀಯ ಕಾಂಗ್ರೆಸಿಗರು ಕಲ್ಲು ತೂರಾಟ ಮಾಡಿ, ಕಾರ್ಯಕರ್ತರ ಹಾಗೂ ಕೆಲವು ಖಾಸಗಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾ ಮತ್ತು ಒಬಿ ವ್ಯಾನ್ ಧ್ವಂಸ ಮಾಡಿದ್ದಾರೆ. 20ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪೆಟ್ಟುಬಿದ್ದಿದೆ.
ಇದು ಪೂರ್ವ ನಿಯೋಜಿತ ಕೃತ್ಯ. ಹೆಣ್ಣು ಮಕ್ಕಳ ಮೇಲೆ ನಡುಬೀದಿಯಲ್ಲಿ ಅದು ಹಗಲು ಹೊತ್ತಿನಲ್ಲಿ ಕಲ್ಲು ಹೊಡೆಯುತ್ತಾರೆಂದರೆ ಜನರ ರಕ್ಷಣೆ ಎಲ್ಲಿದೆ? ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿರುವ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ಎಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆಯೋ ಅದೇ ಸ್ಥಳದಿಂದ ಮತ್ತೆ ರ್ಯಾಲಿ ನಡೆಸುತ್ತೇವೆ. ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ, ಜಗ್ಗುವುದಿಲ್ಲ ಎಂದರು.
ಈ ಕೃತ್ಯಕ್ಕೆ ಕಾರಣರಾದ ಸ್ಥಳೀಯ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇಂತಹ ಘಟನೆಗಳನ್ನು ನೋಡಿದರೆ ರಾಜಕೀಯಕ್ಕೆ ಶುದ್ಧ ಹಸ್ತರು, ಪ್ರಾಮಾಣಿಕರು ಬರಲಾಗದಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬೀದಿಯಲ್ಲಿ ಹೋಗುವ ಹೆಣ್ಣುಮಕ್ಕಳ, ಮುಗ್ಧರ ಮೇಲೆ ಹಲ್ಲೆ ನಡೆಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೇಳಿದ್ದಾರಾ ಎಂದು ನರ್ಸ್ ಜಯಲಕ್ಷ್ಮಿ ಗುಡುಗಿದರು.