ಬೆಂಗಳೂರು ,ಮೇ4-ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆಯನ್ನು ನಿವಾರಿಸಿ ಪ್ರತಿಯೊಬ್ಬರಿಗೂ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲು ನಗರದ ಎಲ್ಲ ಪ್ರದೇಶಗಳಿಗೂ ಮೆಟ್ರೊ ವಿಸ್ತರಣೆ, ಜನರ ಅಗತ್ಯಗಳನ್ನು ಪೂರೈಸಲು ನವ ಬೆಂಗಳೂರು ಕಾಯ್ದೆ, ಮಹಾನಗರವನ್ನು ವಿಶ್ವ ದರ್ಜೆಗೇರಿಸುವುದು ನಾಗರಿಕರ ಸುರಕ್ಷತೆ, ಮೂಲಭೂತ ಸೌಕರ್ಯಗಳಿಗೆ ಒತ್ತು, ವಿಮಾನ ನಿಲ್ದಾಣದವರೆಗೆ ಮೆಟ್ರೋ ವಿಸ್ತರಣೆ ಸೇರಿದಂತೆ ಬಿಜೆಪಿಯ ಪ್ರಣಾಳಿಕೆಯಲ್ಲಿ ಬೆಂಗಳೂರು ನಗರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿ ಬೆಂಗಳೂರು ಮಹಾನಗರಕ್ಕೆ ವಿಶೇಷ ಒತ್ತು ನೀಡಲಾಗಿದೆ.
ಇಂದು ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಮತ್ತಿತರ ಮುಖಂಡರು ಬಿಡುಗಡೆ ಮಾಡಿದರು.
ಸಂಚಾರಿ ಸಮಸ್ಯೆಯನ್ನು ನಿವಾರಿಸಲು ಬೆಂಗಳೂರು ಮಹಾನಗರ ವಲಯದ ಎಲ್ಲ ಪ್ರದೇಶಗಳಿಗೆ ಹಂತ ಹಂತವಾಗಿ ಮೆಟ್ರೋ ವಿಸ್ತರಣೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತ್ವರಿತಗತಿಯಲ್ಲಿ ಮೆಟ್ರೋ ಸಂಪರ್ಕವನ್ನು ಅನುಷ್ಠಾನ ಮಾಡುವ ಭರವಸೆಯನ್ನು ನೀಡಲಾಗಿದೆ.
ಅತ್ತಿಬೆಲೆ , ನೆಲಮಂಗಲ, ಕನಕಪುರ, ರಾಮನಗರ, ಬಿಐಎಎಲ್, ಹೊಸಕೋಟೆಯಲ್ಲಿ ಮಲ್ಟಿ ಮೋಡಲ್ ಸಾರಿಗೆ ಕೇಂದ್ರಗಳನ್ನು ನಿರ್ಮಿಸಿ ಸಂಚಾರ ಒತ್ತಡವನ್ನು ತಗ್ಗಿಸಲಾಗುವುದು. ಬಿಡದಿ, ದಾಬಸ್ಪೇಟೆ, ದೇವನಹಳ್ಳಿ ಮತ್ತು ಅತ್ತಿಬೆಲೆಯಲ್ಲಿ ಲಾಜಸ್ಟಿಕ್ ಪಾರ್ಕ್ ನಿರ್ಮಿಸಿ ಭಾರೀ ಸಂಚಾರ ನಿಯಂತ್ರಣವನ್ನು ತಡೆಗಟ್ಟಲು ಈ ಕ್ರಮಗಳನ್ನು ಕೈಗೊಳ್ಳುವ ಆಶ್ವಾಸನೆಗಳನ್ನು ನೀಡಲಾಗಿದೆ.
ಬೆಂಗಳೂರು ಮಹಾನಗರವನ್ನು ವಿಶ್ವದರ್ಜೆ ನಗರವನ್ನಾಗಿಸಲು ಅತ್ಯಾಧುನಿಕ ಮೂಲಭೂತ ಸೌಕರ್ಯ, ಗುಣಮಟ್ಟದ ಜೀವನ ಹಾಗೂ ನಾಗರಿಕರ ಆಶೋತ್ತರಗಳನ್ನು ಈಡೇರಿಸಲು ಅವಕಾಶ ಸೃಷ್ಟಿ , ಜನರ ಅಗತ್ಯಗಳನ್ನು ಪೂರೈಸಲು ನವ ಬೆಂಗಳೂರು ಕಾಯ್ದೆ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಮನೆಗಳ ಬೆಲೆ ಕಡಿಮೆ ಮಾಡಲು ಉತ್ತಮ ನಗರ ಯೋಜನೆ ಮತ್ತು ವಸತಿ ಪ್ರದೇಶಗಳು ವಾಣಿಜ್ಯ ಚಟುವಟಿಕೆ ಪ್ರದೇಶಗಳಾಗುವುದನ್ನು ತಡೆಗಟ್ಟಲು ಜಪಾನಿ ಜೋನಿಂಗ ಮಾದರಿಯಲ್ಲಿ ಯೋಜನೆ ನಿರ್ಮಾಣ, ದೇವನಹಳ್ಳಿ ಬಳಿ ಐಟಿ ಸಿಟಿ ನಿರ್ಮಾಣ, ಐಐಎಸ್ಸಿ ಬೆಂಗಳೂರು ಹಾಗೂ ಐಐಎಂ ಬೆಂಗಳೂರು ಇವುಗಳ ಸಹಯೋಗದೊಂದಿಗೆ 200 ಕೋಟಿ ವೆಚ್ಚದಲ್ಲಿ ಕೆ-ಹಬ್ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ.
ಐಟಿ ಉದ್ಯಮ ಎದುರಿಸುತ್ತಿರುವ ಸವಾಲುಗಳಿಗೆ ಸ್ಪಂದಿಸಲು 2011ರ ಕರ್ನಾಟಕ ಐಸಿಟಿ ನೀತಿ ಪರಿಷ್ಕರಣೆ, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ರಸ್ತೆ ವಿಸ್ತರಣೆ, ಬಿಟಿಎಂ ಲೇಔಟ್ನಿಂದ ಇಂದಿರಾನಗರ, ವರ್ತೂರು ಮೂಲಕ ಬೊಮ್ಮಸಂದ್ರದಿಂದ ಕಾಡುಗೋಡಿಗೆ, ಬೈರಮಂಗಲ ಹಾಗೂ ಇನೋವೇಟಿವ್ ಫಿಲಂ ಸಿಟಿ ಮೂಲಕ ಹಾರೋಹಳ್ಳಿಯಿಂದ ಬಿಡದಿ ಟರ್ಮಿನ್ಸ್ವರೆಗೆ ಸಂಪರ್ಕ ಮಾರ್ಗಗಳ ನಿರ್ಮಾಣ ಮಾಡುವ ವಾಗ್ದಾನ ಮಾಡಲಾಗಿದೆ.
ಪ್ರತಿಯೊಂದು ಮೆಟ್ರೋ ಸ್ಟೇಷನ್ಗಳಲ್ಲಿ ಸೈಕಲ್ ಪಾರ್ಕಿಂಗ್, ಬಸ್ ನಿಲ್ದಾಣ, ಆಟೋ ನಿಲ್ದಾಣ, ಟ್ಯಾಕ್ಸಿ ನಿಲ್ದಾಣ ಸೌಲಭ್ಯಗಳನ್ನು ಒದಗಿಸಿ ಮಲ್ಟಿ ಮೋಡಲ್ ಟ್ರಾನ್ಸ್ಪೆÇೀರ್ಟ್ ಸ್ಟೇಷನ್ಗಳನ್ನು ಪರಿವರ್ತನೆ ಮಾಡಲಾಗುವುದು.
ಕೇಂದ್ರ ಸರ್ಕಾರ ಘೋಷಿಸಿದ 17 ಸಾವಿರ ಕೋಟಿಗಳನ್ನು ಬಳಸಿ ಬೆಂಗಳೂರು ಉಪನಗರ ರೈಲ್ವೆ ಜಾಲ ಪೂರ್ಣಗೊಳಿಸಲು ಬಿ ರೈಡ್ ಸ್ಥಾಪನೆ, ಬಿಎಂಟಿಸಿ ಬಸ್ ಸಂಖ್ಯೆ ದ್ವಿಗುಣ, ಸಂಚಾರ ದಟ್ಟಣೆ ತಗ್ಗಿಸಲು ಮಿನಿ ಬಸ್ ಸೇವೆ, ಸಮೂಹ ಸಾರಿಗೆ ಜನಪ್ರಿಯಗೊಳಿಸಲು ವಿಶೇಷ ರಿಯಾಯ್ತಿ ಪ್ಯಾಕೇಜ್ಗಳನ್ನು ನೀಡುವ ಭರವಸೆ ನೀಡಲಾಗಿದೆ.
ಸುರಕ್ಷಿತ ಬೆಂಗಳೂರು:
ಬೆಂಗಳೂರಿನಲ್ಲಿರುವ ಪ್ರತಿಯೊಬ್ಬರಿಗೂ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ನಗರದಲ್ಲಿನ ಪೆÇಲೀಸ್ ಠಾಣೆಗಳ ದ್ವಿಗುಣ, ಠಾಣೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ,ಮೂರು ಪಾಳಿಗಳ ವ್ಯವಸ್ಥೆ ಜಾರಿ, ಮಹಿಳಾ ಪೆÇಲೀಸ್ ಠಾಣೆಗಳ ಸಂಖ್ಯೆ ಹೆಚ್ಚಳ , ತೊಂದರೆಗೊಳಗಾಗುವ ಮಹಿಳೆಯರಿಗೆ ಸಹಾಯ ಒದಗಿಸಲು ಕಿತ್ತೂರು ರಾಣಿ ಚನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ವ್ಯವಸ್ಥೆ ಜಾರಿ ಮಾಡುವ ಭರವಸೆ ಕೊಡಲಾಗಿದೆ.
ಉದ್ಯೋಗಸ್ಥ ಮಹಿಳೆಯರಿಗಾಗಿ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಕೇವಲ ಮಹಿಳೆಯರು ಸಂಚರಿಸುವ ಜಿಪಿಎಸ್ ಬಸ್ ಸೌಲಭ್ಯ,ಆಡಳಿತಾತ್ಮಕ ವಲಯದಲ್ಲಿ ಸುಭದ್ರ ಕೇಂದ್ರಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಕಾನೂನು, ಭದ್ರತೆ, ಆಪ್ತಸಮಾಲೋಚನೆ, ವೈದ್ಯಕೀಯ ಸೌಲಭ್ಯ ನೀಡಲಾಗುವುದು.
ಬೆಂಗಳೂರಿನಲ್ಲಿರುವ ಐತಿಹಾಸಿಕ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ನಗರದಾದ್ಯಂತ ಹೆರಿಟೇಜ್ ವಾಕ್ ಪ್ರಚುರಪಡಿಸಲಾಗಿದೆ. ಬೆಂಗಳೂರು ದರ್ಶಿನಿ ಬಸ್ಗಳ ಸಂಖ್ಯೆ ದ್ವಿಗುಣ, ಸೋಮೇಶ್ವರ, ಕಾಡುಮಲ್ಲೇಶ್ವರ, ಬಸವನಗುಡಿಯಂತಹ ಇತಿಹಾಸ ಪ್ರಸಿದ್ದ ದೇವಸ್ಥಾನಗಳಿಗೆ ಮೂಲಸೌಕರ್ಯ ಒದಗಿಸುವುದು, ಉದ್ಯಾನವನಗಳ ಅಭಿವೃದ್ದಿ , ಕೆರೆಗಳ ಪುನಶ್ಚೇತನ, ನಗರದಾದ್ಯಂತ ಫ್ರೀ ಆರ್ಟ್ ವಲಯ ಸ್ಥಾಪನೆ, ಪ್ರತಿಯೊಂದು ವಾರ್ಡ್ಗಳಲ್ಲಿ ಬಯಲು ರಂಗಮಂದಿರಗಳನ್ನು ತೆರೆಯುವ ಆಶ್ವಾಸನೆ ನೀಡಲಾಗಿದೆ.
ಮೂಲಭೂತ ಸೌಕರ್ಯಗಳ ಅಭಿವೃದ್ದಿ:
ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲಾಗುವುದು. ನಗರದಲ್ಲಿರುವ ಕೆರೆಗಳನ್ನು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸಲು 2500 ಕೋಟಿ ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ ನಿಧಿ ಸ್ಥಾಪಿಸಲಾಗುವುದು.
2022ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು ನೀಡುವ ಉದ್ದೇಶದೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಬೆಂಗಳೂರಿನಲ್ಲಿ ಅನುಷ್ಠಾನ ಮಾಡಲಾಗುವುದು.
ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿಸುವುದು, ತ್ಯಾಜ್ಯ ಪುನರ್ಬಳಕೆ, ಪ್ರತಿ ವಾರ್ಡ್ನಲ್ಲಿ 10 ಸಾರ್ವಜನಿಕ ಸೌಲಭ್ಯಗಳ ಸ್ಥಾಪನೆ, ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ನೀಡಲು ಎಲ್ಲ ವಾರ್ಡ್ಗಳಲ್ಲೂ ಆಯುಷ್ಮಾನ್ ಚಿಕಿತ್ಸಾಲಯ ಸೇರಿದಂತೆ ಬೆಳೆಯುತ್ತಿರುವ ಬೆಂಗಳೂರಿನ ಸಮಸ್ಯೆಗಳನ್ನು ನಿವಾರಿಸಲು ಹಲವು ರೀತಿಯ ಭರವಸೆಗಳನ್ನು ನೀಡಲಾಗಿದೆ.