ಜಯನಗರ ಬಿಜೆಪಿ ಶಾಸಕ ಬಿ.ಎನ್.ವಿಜಯ್‍ಕುಮಾರ್ ನಿಧನ

ಬೆಂಗಳೂರು, ಮೇ 4- ಸಜ್ಜನ ರಾಜಕಾರಣಿ, ಜಯನಗರ ಬಿಜೆಪಿ ಶಾಸಕ ಬಿ.ಎನ್.ವಿಜಯ್‍ಕುಮಾರ್ (60) ನಿನ್ನೆ ರಾತ್ರಿ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ಸಂಜೆ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲೇ ಕುಸಿದುಬಿದ್ದರು. ಕೂಡಲೇ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಕರೆತಂದಾಗಲೇ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 1 ಗಂಟೆಗೆ ವಿಜಯ್‍ಕುಮಾರ್ ವಿಧಿವಶರಾಗಿದ್ದಾರೆ.
ಶಾಸಕ ವಿಜಯ್‍ಕುಮಾರ್ ಮೃತಪಟ್ಟ ಸಂಗತಿಯನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಖಚಿತಪಡಿಸಿದ್ದಾರೆ.

ಇಪ್ಪತ್ತು ದಿನಗಳ ಹಿಂದೆ ಹೃದಯದ ನಾಳದಲ್ಲಿ ಸಮಸ್ಯೆ ಉಂಟಾಗಿದ್ದ ಕಾರಣ ವೈದ್ಯರು ಸ್ಟಂಟ್ ಅಳವಡಿಸಿದ್ದರು. ದಿನಕ್ಕೆ ಒಂದೂವರೆ ಕಿಮೀ ಗಿಂತಲೂ ಹೆಚ್ಚು ನಡೆಯಬಾರದು ಎಂದು ಸಲಹೆಯನ್ನೂ ನೀಡಿದ್ದರು. ಚುನಾವಣೆ ಪ್ರಚಾರಕ್ಕಾಗಿ ಹೆಚ್ಚು ನಡೆದ ಕಾರಣ ಅವರಿಗೆ ಸಮಸ್ಯೆ ಉಂಟಾಗಿತ್ತು. ನಿನ್ನೆ ಸಂಜೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಮಂಜುನಾಥ್ ಪ್ರಾಥಮಿಕ ತಪಾಸಣೆ ನಡೆಸಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದರು.

ಜಯನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ವಿಜಯ್‍ಕುಮಾರ್ ಅವರು 2004 ಮತ್ತು 2008ರ ಚುನಾವಣೆಯಲ್ಲಿ ಜಯನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸಜ್ಜನ ರಾಜಕಾರಣಿ, ಜಯನಗರದ ವಾಜಪೇಯಿ ಎಂದೇ ಹೆಸರಾಗಿದ್ದರು.

ವಿಜಯ್‍ಕುಮಾರ್ ನಿಧನಕ್ಕೆ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ರಾಜ್ಯ ಚುನಾವಣಾ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಅನಂತ್‍ಕುಮಾರ್, ಸುರೇಶ್‍ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.

ಬಿಜೆಪಿಯ ಹುರಿಯಾಳಾಗಿದ್ದ ವಿಜಯ್‍ಕುಮಾರ್ ಅವರ ನಿಧನದ ಸುದ್ದಿ ಬರ ಸಿಡಿಲಿನಂತೆ ಬಂದೆರಗಿದ್ದರಿಂದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಕಂಗಾಲಾಗಿ ನಿಂತಿದ್ದರು. ತಮ್ಮ ನಾಯಕನ ಸಾವಿಗೆ ಕಂಬನಿ ಮಿಡಿಯುತ್ತಿದ್ದ ದೃಶ್ಯ ಕಂಡುಬಂತು.
ಮೃತರ ಅಂತ್ಯಕ್ರಿಯೆ ಬ್ರಾಹ್ಮಣರ ಸಂಪ್ರದಾಯದಂತೆ ಇಂದು ಮಧ್ಯಾಹ್ನ ಚಾಮರಾಜಪೇಟೆಯಲ್ಲಿ ನೆರವೇರಿಸುವ ಸಾಧ್ಯತೆ ಇದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ